ಕದ್ರಿಕಂಬ್ಳ ರೇಖಾದೇವಿ

ಕದ್ರಿಕಂಬ್ಳ ರೇಖಾದೇವಿ
ಲೇಖಕರು, ವಿದ್ವಾಂಸರೂ ಆಗಿರುವ ಜಗದೀಶ ಸಂಪರವರು ಹಿಂದೂ ಮಹಾಕಾವ್ಯ ಮಹಾಭಾರತದ ಕರ್ತೃ ವೇದವ್ಯಾಸರೊಡನೆ ಸಂದರ್ಶನ ಮಾಡಿ ಅವರಿಂದ ತನ್ನಲ್ಲಿ ಉದ್ಭವಿಸಿದ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೇನೋ ಎಂಬಷ್ಟು ನೈಜವಾಗಿ ಮೂಡಿ ಬಂದ ಕೃತಿ #ವ್ಯಾಸ_ಸಂದರ್ಶನ. ನಿನ್ನೆಯಷ್ಟೇ #ವೀಣಾ_ಮೇಡಂರವರು ಕಳುಹಿಸಿದ ಪುಸ್ತಕ ವಾದರೂ ಬಂದೊಡನೆಯೇ ಆಕರ್ಷಿಸಿ ಓದುವಂತೆ ಮಾಡಿತು.
ಪುಸ್ತಕ: #ವ್ಯಾಸ_ಸಂದರ್ಶನ.
ಸಂಪ ಕೇಳಿದ್ದು; ವ್ಯಾಸ ಹೇಳಿದ್ದು
ಲೇಖಕರು : #ಜಗದೀಶ_ಶರ್ಮಾ_ಸಂಪ
ಸಾವಣ್ಣ ಎಂಟರ್ಪ್ರೈಸಸ್. ಬೆಂಗಳೂರು. ಆಗಸ್ಟ್ 2025. ಬೆಲೆ: 150.00
ಮುಖಪುಟದಲ್ಲಿ ವ್ಯಾಸರೊಂದಿಗೆ ಲೇಖಕ ಸಂಪರು ವಿಧೇಯ ವಿದ್ಯಾರ್ಥಿಯಂತೆ ನಿಂತಿರುವ ಚಿತ್ರವಿದೆ.
ಸಂಪರ ಮೂವತ್ತನೆಯ ಕೃತಿಯಿದು. ಸುಮಾರು ಎರಡು ವರ್ಷದಿಂದ ವಿವಿದೆಡೆಗಳಲ್ಲಿ ಮಹಾಭಾರತದ ಪ್ರವಚನಗಳನ್ನು ಕೊಡುತ್ತಾ ಬಂದಿರುವ ಲೇಖಕರಿಗೆ ವಿಭಿನ್ನ ನೆಲೆಯಲ್ಲಿ ಮಹಾಭಾರತವನ್ನು ನೋಡುವಂತಾಯ್ತು. #ಗೌರೀಶ_ಅಕ್ಕಿ ಯೂ ಟ್ಯೂಬ್ ವಾಹಿನಿಯ ಸಂದರ್ಶನವೊಂದರಲ್ಲಿ ಗೌರೀಶರು #ನಿಮಗೆ_ವ್ಯಾಸರು_ಸಿಕ್ಕರೆ_ಏನು_ಪ್ರಶ್ನೆ_ಕೇಳುತ್ತೀರಿ ಎಂದು ಕೇಳಿದ ಪ್ರಶ್ನೆ, ಜಮೀಲ್ ಮತ್ತು ವಿಕ್ರಮ ಅಡಿಗರ ಪ್ರೋತ್ಸಾಹವೂ ಮುಂದೊಂದು ದಿನ ಕೃತಿ ರಚನೆಗೆ ಕಾರಣವಾಯ್ತು.
#ವ್ಯಾಸರು_ಲೇಖಕರ_ಜೊತೆ_ಮಾತನಾಡಿದರು_ಅನ್ನುವುದು_ಕಲ್ಪನೆ.
ಆದರೆ
#ವ್ಯಾಸರು_ಏನು_ಮಾತಾಡಿದ್ದಾರೋ_ಅದು_ವಾಸ್ತವ.
ಇದು ಲೇಖಕರ ಮಾತು. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳೂ ಲೇಖಕರದ್ದೇ. ಮಹಾಭಾರತದ ಒಳಗೆ ಆಳವಾಗಿ ಇಳಿಯುತ್ತಾ ಹೋಗಿ ಕೊನೆಗೆ ಕೃತಿಕಾರ ವ್ಯಾಸರಲ್ಲಿಗೇ ಕೊಂಡೊಯ್ದಿತು ಎನ್ನುವ ಲೇಖಕರು ಮಹಾಭಾರತವನ್ನು ಓದಿರುವ ಎಲ್ಲರಲ್ಲೂ ಪ್ರಶ್ನೆಗಳು ಮೂಡಿಯೇ ಮೂಡುತ್ತದೆ . ಮಹಾಭಾರತ ಹೆಚ್ಚು ಹೆಚ್ಚು ಅರ್ಥವಾಗುತ್ತಾ, ಅರ್ಥವಾಗಿಸುತ್ತಾ ಹೋದಂತೆ ಪ್ರಶ್ನೆಗಳನ್ನೂ ನಮ್ಮಲ್ಲಿ ಹುಟ್ಟಿಸುತ್ತಾ ಹೋಗುತ್ತದೆ ಎನ್ನುವುದು ಸಹಜವೂ ಹೌದು.
ಸಂಪರು ಕೇಳಿದ ಪ್ರಶ್ನೆಗಳಿಗೆ, ಅವರಲ್ಲಿ ಮೂಡಿದ ಸಂಶಯಗಳಿಗೆ ವ್ಯಾಸರು ನಸುನಗುತ್ತಾ ಉತ್ತರಗಳನ್ನು ಕೊಡುತ್ತಾ ಹೋಗುತ್ತಾರೆ. ಅರ್ಥವಾಗಿದ್ದನ್ನು ಮತ್ತೆ ಮತ್ತಷ್ಟು ವಿಸ್ತರಿಸಿ ಸರಳಗೊಳಿಸಿ ಹೇಳುವಂತೆ ಕೇಳಿದಾಗಲೂ ವ್ಯಾಸರು ಉತ್ತರಿಸುತ್ತಾರೆ “ನಾನು ಮಾಡಿದ್ದೇ ಈ ಎರಡು ಕೆಲಸಗಳನ್ನು. ವಿಸ್ತರಿಸಿದ್ದು ಮತ್ತು ಸರಳಗೊಳಿಸಿದ್ದು. ಶ್ರೀ ಕೃಷ್ಣ ಹೇಳಿದ ಕರ್ಮಯೋಗವೇ ಇದು. ಕರ್ಮ ಮಾಡಬೇಕು ಆದರೆ ಅದನ್ನು ಕರ್ಮಯೋಗವಾಗಿಸಿಕೊಳ್ಳಬೇಕು. ಶ್ರೀ ಕೃಷ್ಣ ಮತ್ತು ತಾನು ಇರುವುದು ಹೀಗೆಯೇ. ಧರ್ಮಸ್ಥಾಪನೆಯ ಉದ್ದೇಶವದು. ಮೃಣ್ಮಯನನ್ನು ಚಿನ್ಮಯನಾಗಿಸುವಂಥದ್ದು. ಮನುಷ್ಯನನ್ನು ಮಾಧವನಾಗಿಸುವಂಥದ್ದು.
#ಕೆಲವು_ಪ್ರಶ್ನೆಗಳು_ಇಂತಿವೆ:
—– ತಾವು ನಿರ್ಲಿಪ್ತಿಯನ್ನು ಮೈಗೂಡಿಸಿಕೊಂಡವರು. ಇಂಥವರು ಶುಕನ ವಿಷಯದಲ್ಲಿ ಬಂಧ – ಬಾಂಧವ್ಯಗಳನ್ನು ಮೀರಿ ನಿಂತವರು ಸಾಮಾನ್ಯ ತಂದೆಯಂತೆ ವರ್ತಿಸಿದಂತಾಗಲಿಲ್ಲವೇ ? ತಮ್ಮ ಸುಪುತ್ರ ಶುಕ ಅವಧೂತನಾಗಿ ಮನೆ ಬಿಟ್ಟು ಹೊರಟಾಗ, ಭೌತಿಕದಿಂದ ಆಧ್ಯಾತ್ಮಿಕಕ್ಕೆ ಹೆಜ್ಜೆ ಇಟ್ಟಾಗ, ಇಲ್ಲಿಯ ಬದುಕನ್ನು ಕೊಡವಿಕೊಂಡು ಪರಿವ್ರಾಜಕನಾಗಿ ಹೊರಟು ಹೋದಾಗ ನೀವು ನೊಂದಿರಂತೆ, ಬೆಂದಿರಂತೆ. ಆಶ್ರಮದಿಂದ ಹೊರಬಂದು, ದಟ್ಟ ಕಾಡಿನ ನಡುವೆ ನಿಂತು, ಕಣ್ಣೀರು ಹರಿಸುತ್ತಾ #ಮಗನೇ ಎಂದು ಕೂಗಿ ಕರೆದಿರಂತೆ. ಮಗ ಅವಧೂತನಾಗುವುದು ಭಾಗ್ಯವಲ್ಲವೇ? ವೈರಾಗ್ಯವನ್ನು ಆರಿಸಿಕೊಳ್ಳುವ ಮಕ್ಕಳನ್ನು ತಡೆಯುವ ಲೋಕದ ತಂದೆ- ತಾಯಿಗಳಂತೆ ತಾವು ನಡೆದುಕೊಂಡಂತೆ ಆಗಲಿಲ್ಲವೇ? ಅಲ್ಲದೆ ಅವನಿಗೆ ಇಹದ ನಶ್ವರತೆಯನ್ನು ಹೇಳಿದ್ದೂ ನೀವೆಯೇ. ಪರದ ಪಾರಮ್ಯದ ಪಾಠವೂ ನಿಮ್ಮಿಂದಲೇ ಆಗಿದ್ದು. ಬೃಹಸ್ಪತಿಗಳಿಂದ ವಿದ್ಯೆ ಕಲಿತು ಬಂದಿದ್ದನಂತೆ. ಆದರೆ…..
—– ತಮಗೆ ಬರೆಯಲು ಬೇಕಷ್ಟು ಅಂಶಗಳಿದ್ದವು. ಬರೆದಿದ್ದೀರಿ ಕೂಡ. ಆದರೆ ಮಹಾಭಾರತದ ರಚನೆಗೆ ತಾವು ತಮ್ಮನ್ನೇ ಕೊಟ್ಟುಕೊಂಡಂತೆ ಕಾಣಿಸುತ್ತದೆ. ಯಾಕೆ ತಮಗೆ ಮಹಾಭಾರತದ ಮೇಲೆ ಇಷ್ಟು ಆಸಕ್ತಿ? ಆ ವಂಶದೊಂದಿಗೆ ನಿಯೋಗದ ಕಾರಣದಿಂದ ತಮಗಿದ್ದ ಸಂಬಂಧವೇ? ತಮ್ಮ ತಾಯಿಯವರು ಸೇರಿದ ಕುಲ ಅದು ಎಂದೇ? ಅಥವಾ ಇನ್ನೇನಾದರೂ ಕಾರಣವಿದೆಯೇ?
—– ತಮಗೆ ಧೃತರಾಷ್ಟ್ರ ಮತ್ತು ಪಾಂಡು ಇಬ್ಬರೂ ಸಮಾನರು. ಆದರೆ ತಾವು ಮಹಾಭಾರತದಲ್ಲಿ ಪಾಂಡವರ ಪಕ್ಷಪಾತಿಯಾಗಿ ವರ್ತಿಸಿದ್ದೀರಿ ಎನ್ನುವ ಆಕ್ಷೇಪವಿದೆಯಲ್ಲ. ಇದರ ಬಗ್ಗೆ ಏನೆನ್ನುತ್ತೀರಿ?
—– ಮಹಾಭಾರತವೋ ಭಾಗವತವೋ ಪುರಾಣಗಳೋ ಯಾವಾಗ ನಡೆಯಿತು ಎನ್ನುವುದನ್ನು ತಾವು ಸ್ಪಷ್ಟ ಪಡಿಸಿಲ್ಲ. ಅಳೆದುಕೊಳ್ಳಲು ಒಂದಷ್ಟು ಹೊಳಹುಗಳನ್ನಷ್ಟೇ ಬಿಟ್ಟಿದ್ದೀರಿ. ಇದರಿಂದಾಗಿ ಎರಡು ಸಮಸ್ಯೆಗಳು ಇಂದು ತಲೆದೋರಿವೆ. ಮೊದಲನೆಯದ್ದು #ಇವೆಲ್ಲ_ಇತಿಹಾಸವೇ_ಅಲ್ಲ_ಹಾಗೆ_ನಡೆದೇ_ಇಲ್ಲ ಎನ್ನುವ ವಾದಕ್ಕೆ ಇದು ಪುಷ್ಟಿ ನೀಡಿತು. ಎರಡನೆಯದ್ದು #ಕಾಲನಿರ್ಣಯಕ್ಕೆ_ಹೊರಟ_ವಿದ್ವಾಂಸರಲ್ಲಿ_ಹಲವು_ಅಭಿಮತಗಳು_ಹುಟ್ಟಿಕೊಂಡವು. ತಾವು ಕಾಲವನ್ನು ಸ್ಪಷ್ಟಪಡಿಸಿದ್ದರೆ ಈ ಸಮಸ್ಯೆಗಳು ಹುಟ್ಟುತ್ತಿರಲಿಲ್ಲ ಎನ್ನಿಸುತ್ತದೆ. ಇದರ ಬಗ್ಗೆ ತಾವೇನು ಹೇಳುತ್ತೀರಿ?
—– ಮಹಾಭಾರತ ಕೃಷ್ಣ ತಂತ್ರವೇ? ವ್ಯಾಸ ತಂತ್ರವೇ? ತಂತ್ರ ತಪ್ಪಲ್ಲವೇ? ದೊಡ್ಡವರು ಇಂಥ ತಂತ್ರಗಳನ್ನು ಮಾಡಬಹುದೇ?
—- ಒಬ್ಬ ಕೃತಿಕಾರರಾಗಿ ತಮ್ಮಲ್ಲಿ ದ್ರೌಪದಿಯ ಬಗೆಗೆ ಕೇಳಲೇಬೇಕು. ಅವಳ ವಿಷಯದಲ್ಲಿ ನಡೆದಿದ್ದು ಕಾಲದ ದುರಂತ, ಕಾಲದ ಅಧಃಪತನ. ತಮಗೆ ಅದನ್ನು ನಿರೂಪಿಸುವಾಗ ಕಷ್ಟವಾಗಲಿಲ್ಲವೇ? ಸಂವೇದನಾಶೀಲರಾದ ತಾವು ಹೇಗೆ ಅದನ್ನು ಬರೆದಿರಿ?
—– ಮಹಾಭಾರತದ ಸ್ತ್ರೀಯರು ಬಹಳ ವಿಭಿನ್ನವಾಗಿ ಕಾಣಿಸುತ್ತಾರೆ. ನಾನು ಗಮನಿಸಿದಂತೆ ಇಲ್ಲಿ ದುಷ್ಟಸ್ತ್ರೀ ಎಂದು ಒಬ್ಬರೂ ಇಲ್ಕ. ಎಲ್ಲರೂ ಒಳ್ಳೆಯವರೇ. ಯಾಕೆ ಹೀಗೆ? ಒಬ್ಬ ಸ್ತ್ರೀಯೂ ಕೆಟ್ಟವಳಿಲ್ಲದ ಇಷ್ಟು ವಿಸ್ತಾರವಾದ ಚರಿತ್ರೆ ಇರಲು ಸಾಧ್ಯವೇ? ಅಥವಾ ತಾವು ಮಹಿಳಾ ಪಕ್ಷಪಾತಿಯೇ?
ಹೀಗೆ ಇಲ್ಲಿ ಲೇಖಕರು ಕೇಳಿದ ಪ್ರಶ್ನೆಗಳಿಗೆ ವ್ಯಾಸರು ವಿದ್ವತ್ಪೂರ್ಣ ಉತ್ತರಗಳನ್ನು ಮಹಾಭಾರತದ ಮೂಲಕ ಕೊಡುತ್ತಾರೆ. ಲೇಖಕರು ಇಲ್ಲಿ ಕೆಲವು ಶ್ಲೋಕಗಳನ್ನೂ ಉಲ್ಲೇಖಿಸುತ್ತಾರೆ. ತಾವು ಕೇಳಿದ ಪ್ರಶ್ನೆಗಳಲ್ಲಿ ತಮಗೆ ಮನಸ್ಸಿಗೆ ಬಹಳವಾಗಿ ಇಷ್ಟವಾದ ಪ್ರಶ್ನೆ ಯಾವುದು ಎಂಬುದನ್ನೂ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅನುಬಂಧ 1 ರಲ್ಲಿ #ವ್ಯಾಸ_ಸೂಕ್ತಿ ಇದೆ. ಮಹಾಭಾರತದಲ್ಲಿ ವ್ಯಾಸರು ತುಂಬಾ ಕಡೆ ಮಾತನಾಡುತ್ತಾರೆ.
—– ಬೇರೆಯವರ ನೋವಿನಲ್ಲಿ ಸುಖ ಅರಸುವವನು ಎಂದಿಗೂ ಸುಖಿಯಾಗಲಾರ.
—– ಸೇರುವುದು ಮತ್ತು ಬೇರೆಯಾಗುವುದು ಇವೆರಡೂ ನಿಶ್ಚಿತವೇ. ನೀರ ಮೇಲಣ ಗುಳ್ಳೆಯಂತೆ ಹುಟ್ಟುತ್ತವೆ, ಸಾಯುತ್ತವೆ.
ಅಧ್ಯಾಯ 2 #ವ್ಯಾಸೋಲ್ಲೇಖ:
ಇಲ್ಲಿ ವ್ಯಾಸರು ಹೇಳಿದ ಸೇನಜಿತನ ಮಾತುಗಳು:
—– ಕತ್ತಲ ರಾತ್ರಿಗೂ, ಬೆಳದಿಂಗಳ ರಾತ್ರಿಗೂ ಕಾಲವೇ ಕಾರಣ.
—– ಕಾಲ ಬಾರದೇ ಸೂರ್ಯ ಮೂಡಲಾರ; ಕಾಲ ಬಾರದೇ ಅವನು ಮುಳುಗಲಾರ; ಕಾಲ ಬಾರದೇ ಚಂದ್ರ ಬೆಳಗಲಾರ; ಕಾಲ ಬಾರದೇ ಚಂದ್ರ ಕ್ಷಯಿಸಲಾರ; ಕಾಲ ಬಾರದೇ ಸಾಗರ ಉಕ್ಕಲಾರ.
#ವ್ಯಾಸರು_ಹೇಳಿದ_ಅಶ್ಮ_ಮುನಿಯ_ಉಪದೇಶ:
—– ಕುಲದ ಹೆಮ್ಮೆ, ಯಶಸ್ಸಿನ ಗರಿಮೆ, ತಾನು ಅಸಮಾನ್ಯ ಎಂಬ ಭಾವ – ಈ ಮೂರರಲ್ಲಿ ಮನಸ್ಸು ಮುಳುಗಿ ಹೋಗುತ್ತದೆ.
—– ಬಯಸದ ಬಡತನಕ್ಕೆ ಮಕ್ಕಳು ಹೆಚ್ಚು; ಬಯಸುವ ಸಿರಿವಂತಿಕೆಗೆ ಮಕ್ಕಳೇ ಇಲ್ಲ. ಕಾಲದ ಕ್ರಮ ವಿಚಿತ್ರ.
ಅನುಬಂಧ 3 #ವ್ಯಾಸೋಪದೇಶ:
ಇಲ್ಲಿ ವ್ಯಾಸರು ಪುತ್ರ ಶುಕನಿಗೆ ಮಾಡಿದ ಉಪದೇಶವಿದೆ.
—– ನಿನ್ನ ಉಸಿರಾಟದ ಮೇಲೆ ನಿನಗೆ ಹತೋಟಿ ಇರಲಿ.
—– ವರ್ಷಗಳು ಮುಗಿಯುತ್ತಿವೆ; ಆಯುಷ್ಯ ಕ್ಷೀಣಿಸುತ್ತಿದೆ; ಉಳಿದ ಕಾಲ ಕಡಿಮೆ; ಹೀಗಿರುವಾಗ ನೀನೆದ್ದು ಓಡುತ್ತಿಲ್ಲ ಏಕೆ?
—– ರೇಷ್ಮೆ ಹುಳುವಿನಂತೆ ಜೀವಿ ತನ್ನ ಸುತ್ತ ತಾನೇ ಬಂಧನವನ್ನು ಹೆಣೆದುಕೊಂಡಿದ್ದಾನೆ. ಆದರೆ ಅದು ನಿನಗೆ ತಿಳಿಯುತ್ತಿಲ್ಲ.
ವ್ಯಾಸರು ಮಗನಿಗೆ ನೀಡುವ ಉಪದೇಶವಾದರೂ ಇಲ್ಲಿರುವುದು ಸಾರ್ವಕಾಲಿಕ ಸತ್ಯ. ನಮಗೆಲ್ಲರಿಗೂ ಅನ್ವಯಿಸುವಂತಹದು.
ಅನುಬಂಧ 4 #ವ್ಯಾಸ_ಪರಿಚಯ:
ವ್ಯಾಸರ ಹೆಸರುಗಳು, ತಂದೆ, ತಾಯಿ, ಅಜ್ಜ ಅಜ್ಜಿ, ಮುತ್ತಜ್ಜ ಮುತ್ತಜ್ಜಿ, ಮಕ್ಕಳು, ಶಿಷ್ಯರು, ಸ್ಥಳ, ಕೃತಿಗಳ ವಿಷಯವಿದೆ.
#ಇದು_ಕಲ್ಪನೆ_ಆದರೆ_ವಾಸ್ತವ:
ಲೇಖಕ ಸಂಪರು ಹುಡುಗಾಟವಾಯಿತೇ ಎಂದು ಈ ಸಾಹಸ ಮಾಡಿದ್ದು….. ಆದರೆ #ವ್ಯಾಸರ_ಮುಂದೆ_ನಾವೆಲ್ಲಾ_ಚಿಕ್ಕಪುಟ್ಟ_ಹುಡುಗರೇ_ತಾನೇ ಎಂಬ ಅನ್ನಿಸಿಕೆ ಮುಂದೆ ಇದನ್ನು ಬರೆಯುವಾಗ ಮನಸ್ಸಿನ ತುಂಬಾ ಮುದ ತುಂಬಿಸಿದ್ದಂತೂ ನಿಜ ಎಂದು ಮನದ ಮಾತುಗಳನ್ನು ಹೇಳಿಕೊಂಡಿದ್ದಾರೆ.
ವ್ಯಾಸರ ಕುರಿತಾಗಿ ಚಂದದೊಂದು ಮಾತಿದೆ.
ಅಚತುರ್ವದನೋ ಬ್ರಹ್ಮಾ ದ್ವಿಬಾಹುರಪರೋ ಹರಿ:
ಅಭಾಲಲೋಚನ: ಶಂಭು: ಭಗವಾನ್ ಬಾದರಾಯಣ:
ನಾಲ್ಕು ಮುಖವಿಲ್ಲ; ಆದರೆ #ಬ್ರಹ್ಮಾ. ಎರಡೇ ಭುಜಗಳು; ಆದರೆ #ವಿಷ್ಣು. ಹಣೆಯಲ್ಲಿ ಕಣ್ಣಿಲ್ಲ; ಆದರೆ #ಶಿವ. ಅವರೇ #ಭಗವಾನ್_ವ್ಯಾಸರು.
ಇದನ್ನು ಹೇಳಿದಾತ ವ್ಯಾಸರಲ್ಲಿ ತ್ರಿಮೂರ್ತಿಗಳನ್ನು ಕಂಡ. ಮತ್ತದನ್ನು ವೈಚಿತ್ರ್ಯದೊಡನೆ ಮೂಡಿಸಿದ. ವ್ಯಾಸರ ವ್ಯಕ್ತಿತ್ವಕ್ಕೆ ಇದು ಪೂರ್ಣವಾಗಿ ಹೋಲುತ್ತದೆ. ವೈಚಿತ್ರ್ಯವೂ ತ್ರಿಮೂರ್ತಿತ್ವವೂ.
ತಾವು ದೊಡ್ಡವರಾದರಷ್ಟೇ ಸಾಲದು. ಜಗತ್ತನ್ನೂ ಎತ್ತರಕ್ಕೆ ಏರಿಸಬೇಕು. ಇಲ್ಲಿರುವವರ ಕೊರತೆ ಕಳೆಯಬೇಕು. ಅಲ್ಲಿ ಜ್ಞಾನವನ್ನು ತುಂಬಬೇಕು. ಅದರಿಂದ ಎಲ್ಲರೂ ದೊಡ್ಡವರಾಗಬೇಕು. ಇದು #ವ್ಯಾಸರ_ಸಂಕಲ್ಪ. ಇದು #ವ್ಯಾಸರ_ಕಾರ್ಯ.
ಇಲ್ಲಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು, ವ್ಯಾಸರ ನಿಲುವನ್ನು ಮಹಾಭಾರತದಲ್ಲಿ ಬರುವ ಶ್ಲೋಕದ ಮೂಲಕವೇ ಉತ್ತರ ಕೊಡಬಲ್ಲೆ ಎನ್ನುವ ಲೇಖಕರು ಪುಸ್ತಕದಲ್ಲಿ ಕೆಲವೆಡೆ ಅಪರೂಪದ ಶ್ಲೋಕಗಳನ್ನೂ ಉಲ್ಲೇಖಿಸಿದ್ದಾರೆ. ಇದು ತನ್ನ ಉತ್ತರವಲ್ಲ, ಮಹಾಭಾರತದಲ್ಲಿರುವ ವ್ಯಾಸರ ನಿಲುವು ಎಂದು ಸ್ಪಷ್ಟ ಪಡಿಸಿದ್ದಾರೆ.
ಲೇಖಕರು ಪುಸ್ತಕದಲ್ಲಿ ಒಂದು ಪ್ರಶ್ನೆಯನ್ನು ಹಲವು ತರಹದಲ್ಲಿ ಪದೇ ಪದೇ ಕೇಳಿದ್ದರೂ ವ್ಯಾಸರು ಉತ್ತರ ಕೊಟ್ಟಿಲ್ಲ. ಆ ಪ್ರಶ್ನೆ ಯಾವುದೆಂದು ನೀವೇ ಓದಿ ನೋಡಿ. ಮಹಾಭಾರತದಲ್ಲಿ ವ್ಯಾಸರೊಡನೆ ಕೇಳಬೇಕೆಂದಿರುವ ನಮ್ಮೊಳಗಣ ಕುತೂಹಲದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಓದಲೇ ಬೇಕಾದ ಪುಸ್ತಕವಿದು. ಈಗಾಗಲೇ ಮಹಾಭಾರತ, ರಾಮಾಯಣಗಳ ಮೂಲಕ ಅನೇಕ ಮಹತ್ವಪೂರ್ಣ ಕೃತಿಗಳನ್ನು ರಚಿಸಿರುವ ಲೇಖಕರಿಂದ ಮತ್ತಷ್ಟು ಕೃತಿಗಳು ಹೊರಹೊಮ್ಮಲಿ ಎಂಬ ಶುಭ ಆಶಯಗಳೊಂದಿಗೆ,
ಕದ್ರಿಕಂಬ್ಳ ರೇಖಾದೇವಿ
17.09.2025