ಗೋಪಾಲಕೃಷ್ಣ ಕುಂಟಿನಿ
ಗೋಪಾಲಕೃಷ್ಣ ಕುಂಟಿನಿ

ಮಹಾಭಾರತದೊಳಗೆ ವ್ಯಾಸರನ್ನು ಪ್ರಶ್ನಿಸಿದ್ದು ಜನಮೇಜಯ ಮಾತ್ರಾ ಎಂದು ನನ್ನ ಅಭಿಪ್ರಾಯ.
ಎರಡು ಸಂದರ್ಭಗಳಲ್ಲಿ ಅವರನ್ನು ಆತ ಕೇಳಿದ್ದ.
ಎರಡೂ ಸರ್ಪಯಾಗ ಮುಗಿಯುತ್ತಿದ್ದ ಹೊತ್ತಿನಲ್ಲಿ,
ಮಹಾಭಾರತ ಕತೆಯನ್ನು ಕೇಳಿ ಹಾಲ್ಗಡಲನ್ನು ಶಂಖದಲ್ಲಿ ತುಂಬಿಟ್ಟುಕೊಂಡ ಹಾಗಾಯಿತು ಎಂದಿದ್ದ ಜನಮೇಜಯ, ವ್ಯಾಸರಿಗೆ ನೇರವಾಗಿ ಕೇಳುತ್ತಾನೆ,
‘ಪಾಂಡವರು ಮಾಡಿದ ರಾಜಸೂಯವೇ ಮಹಾಯುದ್ಧಕ್ಕೆ ಮೂಲವಾಯಿತು. ಯುದ್ಧದಲ್ಲಿ ರಾಜರ ವಿನಾಶವಾದುದನ್ನು ನೋಡಿದರೆ, ರಾಜಸೂಯದ ಕಲ್ಪನೆಯು ಯುದ್ಧಕ್ಕಾಗಿಯೇ ಆಗಿತ್ತು ಎಂದೆನಿಸುತ್ತದೆ.ಚರಿತ್ರೆಯಲ್ಲಿ ಎಲ್ಲೆಲ್ಲಿ ಯಾವಾಗೆಲ್ಲಾ ರಾಜಸೂಯ ನಡೆಯಿತೋ ಆಮೇಲೆ ಅಲ್ಲೆಲ್ಲಾ ಮಹಾಯುದ್ಧಗಳೂ ನಡೆದ ನಿದರ್ಶನಗಳಿವೆ. ಇದೆಲ್ಲಾ ನಿನಗೆ ಗೊತ್ತೇ ಇದೆ, ಆದರೂ ನೀನೇಕೆ ರಾಜಸೂಯವನ್ನು ತಡೆಯಲಿಲ್ಲ? ನೀನು ನಮ್ಮ ಪೂರ್ವಜರ ಪಿತಾಮಹ. ನಮ್ಮ ಪೂರ್ವಜರ ಜನ್ಮದಾತ. ನೀನು ನಮ್ಮ ವಂಶದ ರಕ್ಷಕ. ನಿನಗೆ ಭೂತ-ಭವಿಷ್ಯಗಳ ಜ್ಞಾನವಿದೆ. ಹೀಗಿದ್ದೂ ಯುಧಿಷ್ಠಿರನಿಗೆ ರಾಜಸೂಯ ಯಾಗ ಮಾಡಬೇಡ ಎಂದು ನೀನು ಏಕೆ ಹೇಳಲಿಲ್ಲ?’
ಎಂಥ ಪ್ರಶ್ನೆ ಇದು!
ಬೇರೆ ಯಾರಾದರೂ ತಬ್ಬಿಬ್ಬಾಗಬೇಕು. ಆದರೆ ವ್ಯಾಸರು ಕೊಂಚವೂ ಅಳುಕದೇ ಕೊಟ್ಟ ಉತ್ತರ ಇದು,
‘ಅವನು ನನ್ನಲ್ಲಿ ಭವಿಷ್ಯದ ಪರಿಣಾಮದ ಕುರಿತು ಕೇಳಲಿಲ್ಲ ಮತ್ತು ನಾನು ಕೇಳದೇ ಯಾರಿಗೂ ಏನನ್ನೂ ಹೇಳುವುದಿಲ್ಲ. ಇನ್ನೂ ಒಂದು ಮಾತು ಕೇಳಿಸಿಕೋ, ಭವಿಷ್ಯವನ್ನು ತಡೆಯುವ ಸಾಮರ್ಥ್ಯ ಯಾರಿಗೂ ಇಲ್ಲ. ಏಕೆಂದರೆ ಕಾಲನ ಗತಿಯನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ.’

ಪ್ರಸಂಗ -2
ಅದೇ ಅದೇ ಯಾಗಶಾಲೆಯಲ್ಲಿ ಮಹಾಭಾರತ ಕಥಾನಕದ ಪ್ರಸ್ತುತಿಯನ್ನು ವೈಶಂಪಾಯನ ಮಾಡುತ್ತಿದ್ದಾಗ, ಧೃತರಾಷ್ಟ್ರನಿಗೆ ಅವನ ಮಕ್ಕಳನ್ನು ವ್ಯಾಸರು ದಿವ್ಯದೃಷ್ಟಿ ಮೂಲಕ ತೋರಿಸಿದ ವಿವರಗಳ ಸಂಚಿಕೆ ಬಂತು. ಇದನ್ನು ಕೇಳಿದ ಜನಮೇಜಯ ಯಾಗ ಶಾಲೆಯಲ್ಲಿ ಅತ್ತಿತ್ತ ಅಡ್ಡಾಡುತ್ತಿದ್ದ ವ್ಯಾಸರಿಗೆ ಹೇಳಿದ, ‘ಕುರುಡ ಧೃತರಾಷ್ಟ್ರನಿಗೇ ಅವನ ಮಕ್ಕಳನ್ನು ನೀನು ತೋರಿಸಿದ್ದೀಯಾ ಅಂದರೆ ನನಗೂ ನನ್ನಪ್ಪನನ್ನು ತೋರಿಸು. ಹಾಗೆ ನೀನು ತೋರಿಸಿದ್ದೇ ಆದರೆ ನಾನು ನೀನು ಹೇಳಿದ್ದನ್ನು ನಂಬುತ್ತೇನೆ.
ನನ್ನ ತಂದೆ ಅದೇ ರೂಪದಲ್ಲಿ, ಅದೇ ವೇಷದಲ್ಲಿ, ಅದೇ ವಯಸ್ಸಿನಲ್ಲಿ ನನಗೆ ಕಾಣಬೇಕು. ಅವನನ್ನು ತೋರಿಸು. ಹಾಗೆ ಕಾಣಿಸಿದರೆ ನೀನು ಹೇಳಿದ ಇಷ್ಟೂ ಕತೆಯನ್ನು ನಂಬುತ್ತೇನೆ. ಅಪ್ಪನನ್ನು ಪ್ರತ್ಯಕ್ಷ ಕಾಣದ ಹೊರತು ಮಹಾಭಾರತವನ್ನೇ ನಂಬುವುದಿಲ್ಲ ಎಂಬ ಮಟ್ಟಿಗೆ ಜನಮೇಜಯ ಬಂದು ಬಿಟ್ಟಿದ್ದ.
ವ್ಯಾಸರೋ ಜನಮೇಜಯನ ಬೇಡಿಕೆಯನ್ನು ಪೂರೈಸಿದರು. ಪರಿಕ್ಷಿತನನ್ನು ಬರಮಾಡಿಸಿ ಅಪ್ಪ ಮಗನ ಭೇಟಿ ಮಾಡಿಸಿದರು.

ಗೆಳೆಯ ಜಗದೀಶ ಶರ್ಮಾ ಅವರ ‘ವ್ಯಾಸ ಸಂದರ್ಶನ’ ಪುಸ್ತಕವನ್ನು ಓದುತ್ತಿದ್ದಾಗ ಈ ಎರಡು ಪ್ರಸಂಗಗಳು ನೆನಪಿಗೆ ಬಂದವು. ಈ ಪುಸ್ತಕದಲ್ಲಿ ಶರ್ಮಾರು ವ್ಯಾಸರನ್ನು ಪ್ರಶ್ನಿಸಿದ ಸಂದರ್ಭಗಳೂ ಕಂಡವು. ಆರಂಭದಲ್ಲಿ ಗುರುಶಿಷ್ಯ ಸಂವಾದದಂತೆ ಕಾಣುವ ಸಾಲುಗಳು ಮುಂದೆ ಸಾಗುತ್ತಾ ಶಿಷ್ಯ ಗುರುವನ್ನು ಪ್ರಶ್ನಿಸುವ ಹಂತಕ್ಕೆ ಬಂದಿದೆ.ನೀವೇಕೆ ನಿಮ್ಮ ಅಧ್ಯಯನದ ಬಗ್ಗೆ ಬರೆದುಕೊಂಡಿಲ್ಲ? ನೀವೇಕೆ ಮಹಾಭಾರತಕ್ಕೇ ಹೆಚ್ಚು ಒತ್ತುಕೊಟ್ಟು ಬರೆದಿದ್ದೀರಿ? ಮಹಾಭಾರತ ಕೃತಿ ಏಕೆ ಶಾಂತರಸದಲ್ಲಿ ಇದೆ?ಈ ಕೃತಿ ನಿಮ್ಮ ತಂತ್ರವೇ? ಕೃಷ್ಣನ ತಂತ್ರವೇ? ಆದರೂ ಅದು ನಿಮ್ಮ ತಂತ್ರವೇ ಆಗಿರಬೇಕಿತ್ತಲ್ಲ? ಕಷ್ಟಕಾಲದಲ್ಲಿ ಅನೇಕ ಪಾತ್ರಗಳ ಜೊತೆ ಹೋಗಿ ನಿಂತ ನೀವು ದ್ರೌಪದಿಯ ಸಂಕಷ್ಟದ ಹೊತ್ತಲ್ಲಿ ಏಕೆ ಹೋಗಲಿಲ್ಲ? ಅಶ್ವತ್ಥಾಮ ಕೊಲೆಗಳನ್ನು ಮಾಡುವಾಗ ಸುಮ್ಮನಿದ್ದ ನೀವು ಅವನ ವಧೆಗೆ ಪಾಂಡವರು ಬಂದಾಗ ರಕ್ಷಿಸಲು ಬಂದಿದ್ದೇಕೆ?ಯುಧಿಷ್ಠಿರ ಸುಳ್ಳು ಹೇಳಿದ್ದು ತಪ್ಪಲ್ಲವೇ? ಹೀಗೇ ಹಲವು ಪ್ರಶ್ನೆಗಳನ್ನು ಶರ್ಮಾ ಕೇಳುತ್ತಾರೆ,ವ್ಯಾಸರಿಂದ ಉತ್ತರ ತೆಗೆದುಕೊಳ್ಳುತ್ತಾರೆ.
ನನಗೆ ಬಹಳ ಇಷ್ಟವಾದ ಪ್ರಶ್ನೆ ಇದು,”ಇನ್ನೇನೋ ಅದ್ಭುತ ಸಾಧಿಸುವುದರಲ್ಲಿದ್ದ ತಾವು ಲೋಕದ ಜಂಜಡಕ್ಕೆ ಏಕೆ ಬರುತ್ತೀರಿ?”

ವಾಸ್ತವವಾಗಿ ಈ ಕೃತಿ ಜಗದೀಶ ಶರ್ಮಾ ಅವರ ಏಕಪಾತ್ರಾಭಿನಯ. ಇಲ್ಲಿ ಸಂಪ ಮತ್ತು ವ್ಯಾಸ ಇಬ್ಬರೂ ಅವರೇ. ಯಾರು ಸಂಪ? ಯಾರು ವ್ಯಾಸ? ಅವರಿಗೆ ಅವರೇ ಪ್ರಶ್ನೆಗಳನ್ನು ಕೇಳಿಕೊಂಡು ಉತ್ತರಿಸುತ್ತಿದ್ದಾರೆ. ಅಂದರೆ ಇದು ವ್ಯಾಸಪ್ರವೇಶ, ವ್ಯಾಸವೇಷ ಮತ್ತು ವ್ಯಾಸಾನುಸಂಧಾನ. ಮಹಾಭಾರತದ ಓದುಗರಿಗೆ ಇದು ಅನುಬಂಧ.

https://www.facebook.com/share/1CVhLsxsaq/