ಗೋಪಾಲಕೃಷ್ಣ ಕುಂಟಿನಿ

ಗೆಳೆಯ ಜಗದೀಶ ಶರ್ಮಾ ಸಂಪ,

ಮೊನ್ನೆ ನಿಮ್ಮ ಪುಸ್ತಕ ‘ಭಾರತದ ಭವ್ಯ ಕಥೆಗಳು’ ಓದಿ ಮುಚ್ಚಿದ ಮೇಲೆ ನನ್ನಷ್ಟಕ್ಕೇ ಯೋಚಿಸಿದೆ, ಈ ಜಗದೀಶ ಶರ್ಮಾ ಯಾವುದಕ್ಕೆ ಫೇಮಸ್ಸು? ಪುಸ್ತಕ ಬರಹಕ್ಕಾ? ಪ್ರವಚನಕ್ಕಾ? ಸಂವಾದಕ್ಕಾ?
ಯಾವುದಕ್ಕೆ ಎಂಬುದನ್ನು ನೀವೇ ಹೇಳಬೇಕು.

ಯಾವುದಕ್ಕೇ ಆಗಿರಲಿ, ನಿಮ್ಮೊಳಗಿರುವ ಚಿಂತಕ ಬಂದಲ್ಲೆಲ್ಲಾ ನೀವು ಗೆಲ್ಲುತ್ತೀರಿ. ಸರಳವಾದುದನ್ನು ಹೇಳುವ ನಿಮ್ಮ ಕ್ರಮದಲ್ಲಿ ಸರಳತೆಯ ಜೊತೆಗೆ ಅದೊಂದು ಇಂಟ್ಯೂಶನ್ ಅಂತಾರಲ್ಲ, ಅದು ನನಗೆ ಬಹಳ ಮುಖ್ಯವಾಗುತ್ತದೆ. ನಿಮ್ಮ ಅನೇಕ ಸಂವಾದಗಳ ವೀಡಿಯೋಗಳನ್ನು ನಾನು ನೋಡಿದ್ದೇನೆ. ಉದಾಹರಣೆಗೆ ನೀವು ಕುಂತಿ ಮತ್ತು ಗಾಂಧಾರಿಯರನ್ನು ಸಮೀಕರಿಸುತ್ತಾ ಹೊಸ ಬಗೆಯಲ್ಲಿ ಪಾತ್ರಗಳನ್ನು ಅನ್ವೇಷಿಸಲು ಪ್ರೇರೇಪಿಸುತ್ತೀರಿ, ಆ ಬಗೆ ನನಗೆ ಇಷ್ಟವಾಯಿತು.

ನಿಮ್ಮ ಹೊಸ ಪುಸ್ತಕದ ಕುರಿತು ನನ್ನ ಅಭಿಪ್ರಾಯ ಇಷ್ಟು.
ನೀವು ಈ ಪುಸ್ತಕಕ್ಕಾಗಿ ಎತ್ತಿಕೊಂಡಿರುವ ಕತೆಗಳು ಅನೇಕರಿಗೆ ಹೊಸತು ಹೆಚ್ಚಿನವರಿಗೆ ಹಳತು. ಆದರೆ ಆ ಕತೆಗಳನ್ನು ನೀವು ಹೇಳುವ ರೀತಿಯಲ್ಲಿ ಓದುಗರಿಗೆ ಹೊಸಸ್ವಾದ ಮತ್ತು ಹೊಸಘಮ. ಇಂಥ ಕಥೆಗಳು ಎಚ್ಚರದಲ್ಲೂ ಬಂದು ಧಾಂಗುಡಿ ಇಡುತ್ತವೆ ಎಂದು ನೀವು ಒಂದು ಕಡೆ ಹೇಳಿಕೊಂಡಿದ್ದೀರಿ. ಎಚ್ಚರದಲ್ಲೂ ಬರುವ ಕುರಿತು ನೀವು ಹೀಗೆ ಹೇಳಿದ್ದು ಎಕ್ಸಲೆಂಟ್ ಆಗಿತ್ತು.
ರುರು ಪ್ರಮದ್ವರೆಯ ಕತೆಯಲ್ಲಿ ನೀವು ಯಮನೂ ನಿಷ್ಕಲ್ಮಶ ಪ್ರೀತಿಯನ್ನು ಮನಸಾ ವಹಿಸಿಕೊಳ್ಳುವ ರೀತಿಯನ್ನು ವಿವರಿಸಿದ್ದೀರಿ. ವೇದವತಿ ರಾವಣನಿಗೆ ಜನ್ಮಜನ್ಮಾಂತರಕ್ಕೆ ಮುಳುವಾದ ಕತೆಯನ್ನು ಹೇಳುವಾಗ ಹಿಮಗಿರಿಯ ತಂಪಿಗೆ ಹೇಮಂತ ಋತು ಜೊತೆಯಾದ ಬಗೆಯಿಂದ ಶುರುಮಾಡುತ್ತೀರಿ. ಕತೆಯನ್ನು ಮತ್ತೆ ಮತ್ತೆ ಹೇಳುವುದು ಬೇರೆ, ತೋರಿಸುವುದು ಬೇರೆ, ಕೇಳಿಸುವುದು ಬೇರೆ.

ನಿಮಗೆ ಪುರಾಣದ ಕತೆಗಳನ್ನು ಇನ್ಸ್ಟಾ ಕಾಲಕ್ಕೆ ತರುವುದು ಒಲಿದಿದೆ; ಅದು ಪ್ರವಚನವಿರಲಿ, ಸಂವಾದವಿರಲಿ, ಪುಸ್ತಕವಾಗಿರಲಿ. ಮತ್ತೆ ಮತ್ತೆ ಹೇಳುತ್ತಿರಿ, ಕೇಳುವುದಕ್ಕೆ ಓದುವುದಕ್ಕೆ ನಿಮ್ಮ ಮುಂದೆ ನಾವಿದ್ದೇವೆ.
Jagadisha Sharma Sampa

https://www.facebook.com/share/1DMjUooGtc/