ನಟರಾಜು ಮೈದನಹಳ್ಳಿ

ನಟರಾಜು ಮೈದನಹಳ್ಳಿ
#ವಿದ್ವಾನ್_ಜಗದೀಶಶರ್ಮಾ_ಸಂಪ ರವರ ಕೃತಿ #ಕುಂತಿ_ಪಾಂಡು
ಮಹಾಭಾರತದ ಕತೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಧೃತರಾಷ್ಟ್ರ, ಗಾಂಧಾರಿ, ಭೀಷ್ಮ, ದ್ರೋಣ, ಕೃಷ್ಣ, ಭೀಮ, ದುರ್ಯೋಧನನ, ಅರ್ಜುನ, ದ್ರೌಪದಿ, ಕರ್ಣ, ಶಕುನಿ, ಅಭಿಮನ್ಯು ಇಂತಹ ಅನೇಕ ಪ್ರಮುಖ ವ್ಯಕ್ತಿಗಳ ವ್ಯಕ್ತಿತ್ವ, ಗುಣಗಳು, ವಿಶೇಷತೆ ಜನಸಾಮಾನ್ಯರಿಗೂ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಪಾಂಡವರ ತಂದೆ ತಾಯಿ- ಪಾಂಡು ಮತ್ತು ಕುಂತಿಯವರ ವ್ಯಕ್ತಿತ್ವ ವಿಶೇಷತೆ ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ಪಾಂಡುವಿನ ವೀರತ್ವ, ದಿಗ್ವಿಜಯಗಳು , ದಕ್ಷ ಜನಾನುರಾಗಿ ಆಡಳಿತ, ಧರ್ಮದ ನಡುವಳಿಕೆ, ತ್ಯಾಗ, ಸಂಯಮದ ಗುಣ, ಛಲದಿಂದ ತಪಸ್ಸು ಮಾಡಿ ಬ್ರಹ್ಮರ್ಷಿ ಸಮಾನ ಪದವಿಗೇರಿದ ಅಂಬಾಲಿಕೆಯ ಪುತ್ರನಾದ ಪಾಂಡುವಿನ ಬಗ್ಗೆ ಅಷ್ಟಾಗಿ ಗೊತ್ತಿಲ್ಲ. ಆದರೆ ಎಲ್ಲಾ ಬಿಳುಪನ್ನು ಮಸಿ ನುಂಗಿತು ಎನ್ನುವಂತೆ ಜಿಂಕೆಯ ವೇಷದಲ್ಲಿ ಮೈಥುನ ಸುಖದಲ್ಲಿ ಮೈ ಮರೆತಿದ್ದ ಕಿಂದಮ ಋಷಿ ಹಾಗು ಅವನ ಸಂಗಾತಿ ಜಿಂಕೆಯನ್ನು ಬಾಣ ಬಿಟ್ಟು ಬೇಟೆಯಾಡಿ ಸಾಯಿಸಿದ ಒಂದೇ ತಪ್ಪಿನಿಂದ ಶಾಪಕ್ಕೆ ಗುರಿಯಾದುದು ಆತನ ಜೀವನ ದಿಕ್ಕನ್ನೇ ಬದಲಾಯಿಸಿತು. ಆತನ ಬದುಕನ್ನು ಹಾಳು ಮಾಡಿತು.
ಕುಂತಿಭೋಜನ ಸಾಕು ಮಗಳು, ಪಾಂಡವರ ತಾಯಿ ಕುಂತಿಯೂ ಅಷ್ಟೇ. ಕುಂತಿ ಕೃಷ್ಣನ ತಂದೆ ವಸುದೇವನ ತಂಗಿ. ಕುಂತಿ ಮಹಾಭಾರತದ ಉದ್ದಕ್ಕೂ ಕಾಣಿಸಿದರೂ ಆಕೆಯ ವ್ಯಕ್ತಿತ್ವ ಎಲ್ಲೂ ಢಾಳಾಗಿ ಕಾಣಿಸುವುದಿಲ್ಲ. ಕರ್ಣ ತನ್ನ ಮಗ ಎಂದು ಸಾರದೆ ಕರ್ಣನ ದುರವಸ್ಥೆಗೆ ಕುಂತಿಯೇ ಕಾರಣ ಎಂಬ ನಿಂದನೆಯ ಮಾತು ಬಿಟ್ಟರೆ ಆಕೆಯ ವ್ಯಕ್ತಿತ್ವ ಅಷ್ಟಾಗಿ ಪರಿಚಯವಾಗುವುದೇ ಇಲ್ಲ. ಆಕೆಯ ಸೌಂದರ್ಯ, ಸಹನೆ, ಗಾಂಭೀರ್ಯ, ಪ್ರಬುದ್ಧತೆ, ವಿನಯ, ವಿವೇಕ, ಸಮರ್ಪಣೆ, ತಪಸ್ಸು, ತ್ಯಾಗ , ಎಲ್ಲರನ್ನೂ ಪ್ರೀತಿಯಿಂದ ಕಾಣುವ ಗುಣ ಗೊತ್ತೇ ಇರುವುದಿಲ್ಲ. ಕುರುರಾಜ ಪಾಂಡುವಿನ ಪಟ್ಟದ ರಾಣಿಯಾಗಿದ್ದರೂ, ಶ್ರೀ ಕೃಷ್ಣ ಪರಮಾತ್ಮನ ಸೋದರತ್ತೆಯಾಗಿದ್ದರೂ, ಅಪ್ರತಿಮ ವೀರರು, ಸಾಹಸಿಗಳು ಆದ ಪಾಂಡವರಂತಹ ಮಕ್ಕಳಿದ್ದರೂ ಆಕೆ ಜೀವನದಲ್ಲಿ ಅನುಭವಿಸಿದ್ದು ಹೆಚ್ಚು ನೋವೇ. ತನ್ನ ಮಕ್ಕಳಾದ ಪಾಂಡವರ ಜೊತೆ ಆಕೆ ಸದಾ ಇರಲು ಸಾಧ್ಯವಾಗುವುದೇ ಇಲ್ಲ. ಇಂದ್ರಪ್ರಸ್ಥ ದಲ್ಲಿ ಪಾಂಡವರು ಆಡಳಿತ ನಡೆಸುವಾಗ, ವನವಾಸ ಅಜ್ಞಾತವಾಸದ 13 ವರ್ಷದಲ್ಲಿ ಆಕೆ ದೂರವೇ ಉಳಿಯಬೇಕಾಯಿತು. ಭೀಷ್ಮ, ವಿದುರರನ್ನು ಹೊರತುಪಡಿಸಿ ಕೌರವರಿಂದಲೂ ಆಕೆಗೆ ಹೆಚ್ಚು ಪ್ರೀತಿ ಸಿಗಲಿಲ್ಲ. ಗಂಡನ ಜೊತೆಗೂ ಹೆಚ್ಚು ವರ್ಷ ಬಾಳಲಾಗಲಿಲ್ಲ. ಪಾಂಡವರು ಕುರುಕ್ಷೇತ್ರ ಯುದ್ಧ ಗೆದ್ದು ಕುರುಸಾಮ್ರಾಜ್ಯಕ್ಕೆ ಸಾಮ್ರಾಟರಾದರು ಆಕೆ ಬಹಳ ವರ್ಷ ಅವರ ಜೊತೆ ಸುಖ ಅನುಭವಿಸದೆ ಕಾಡಿಗೆ ಹೋಗುತ್ತಾಳೆ. ಆದರೆ ಆಕೆ ತೆರೆಮರೆಯಾಗಿಯೇ ಉಳಿದಿದ್ದಾಳೆ.
ಲೇಖಕರು ಮಹಾಭಾರತದ ಕತೆ ಹೇಳುತ್ತಾ ಈ ಕೃತಿಯಲ್ಲಿ ಪಾಂಡು ಕುಂತಿಯವರ ಸಮಗ್ರ ವ್ಯಕ್ತಿತ್ವವನ್ನು ಬಹಳ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಈ ಪುಸ್ತಕ ಓದಿದ ನಂತರ ಪಾಂಡು ಮತ್ತು ಕುಂತಿಯವರ ಬಗ್ಗೆ ನಮ್ಮ ಅವಗಾಹನೆಯೇ ಬದಲಾಗುತ್ತದೆ. ಸಂಪರವರು ಪಾತ್ರಗಳನ್ನು ಕಟ್ಟಿಕೊಡುವ ರೀತಿ ಅನನ್ಯ. ಪುಸ್ತಕ ನೀವೂ ಓದಿ.
ವಿವಿಧ ಲೇಖಕರು ಬರೆದಿರುವ ಮಹಾಭಾರತ ಕತೆಯ ಅನೇಕ ಪುಸ್ತಕಗಳನ್ನು ನಾನು ಓದಿದ್ದರೂ ನನಗೆ ಜಗದೀಶ ಶರ್ಮಾ ಸಂಪರವರ ಬಾಯಿಯಿಂದ ಮಹಾಭಾರತ ಹಾಗು ರಾಮಾಯಣದ ಕತೆಯನ್ನು ಕೇಳುವುದು ಬಹಳ ಇಷ್ಟ. ನಾನು ಅವರ #ಮಹಾಭಾರತದ_ರಹಸ್ಯಗಳು ಸರಣಿಯ ಬಹುತೇಕ ಎಲ್ಲಾ ಎಪಿಸೋಡುಗಳನ್ನು ನೋಡಿದ್ದೇನೆ. ಮಹಾಭಾರತದ ಕತೆಯನ್ನು ಪಾತ್ರಗಳ ವ್ಯಕ್ತಿತ್ವವನ್ನು ತಮ್ಮದೇ ಆದ ಶೈಲಿಯಲ್ಲಿ ವಿವರಿಸುವುದನ್ನು ಕೇಳುವಾಗ ಇನ್ನಷ್ಟು ಕೇಳಬೇಕು ಅನಿಸುತ್ತದೆ. ಧನ್ಯವಾದಗಳು ಸರ್. 🙏