ಮಂಗಳ.ಟಿ.ಎಸ್. ತುಮರಿ
ಮಂಗಳ.ಟಿ.ಎಸ್. ತುಮರಿ

ಪಂಡಿತರಿಗೆ ಸಂಗ್ರಹಯೋಗ್ಯ
ಪಾಮರ ಯುದ್ಧಕುತೂಹಲಿಗಳ ಧರ್ಮಯುದ್ಧ ಕಾಣುವ ಭಾಗ್ಯ

ಈ ಕಾಲದ ಓದಿಗೆ ಒಂದು ವ್ಯವಧಾನವಿಲ್ಲ. ಓದಬೇಕೆಂಬ ತುಡಿತವಿದ್ದರೂ ದೊಡ್ಡ ಪುಸ್ತಗಳನ್ನು ಓದುವವರ ಸಂಖ್ಯೆ ಕಡಿಮೆಯೇ.ಮಾಧ್ಯಮಗಳು ಸೇರಿದಂತೆ ಅದಕ್ಕೆ ಕಾರಣಗಳು ಹಲವು. ಪುರಾಣದ ಓದಿಗೆ ಪ್ರೇರೇಪಿಸುವ, ಸ್ಪಷ್ಟವಾಗಿ ಬಹಳ ಅಧಿಕೃತವಾಗಿ ಮಾಹಿತಿ ನೀಡಬಲ್ಲ ಇತ್ತೀಚಿನ ಒಂದು ಭಿನ್ನ ಪುಸ್ತಕ ವಿದ್ವಾನ್ ಜಗದೀಶ ಶರ್ಮರ ಸಾವಣ್ಣ ಪ್ರಕಾಶನ ಪ್ರಕಾಶಿಸಿದ ‘ಕುರುಕ್ಷೇತ್ರ’.

ಮಹಾಭಾರತದ ಹೃದಯಭಾಗದಂತಿರುವ ಕುರುಕ್ಷೇತ್ರದ ಯುದ್ದ ಹದಿನೆಂಟು ದಿನಗಳ ಕೌರವರ ಪಾಂಡವರ ನಡುವಿನ ಧರ್ಮಯುದ್ಧ . ಬಹಳ ಅಶ್ಚರ್ಯವೆಂದರೆ ಪ್ರಪಂಚದ ಯಾವುದೇ ಯುದ್ಧ ಸಂಬಂಧಿ ಸಾಹಿತ್ಯ ಓದಿ ಮುಗಿಸಿದ ಮೇಲೆ ಢಾಳಾದ ವಿಷಾದವೊಂದು ಆವರಿಸಿಕೊಂಡು ಬಿಡುತ್ತದೆ. ಯುದ್ಧದ ಭೀಕರತೆ ಮನಸ್ಸನ್ನು ಕರಗಿಸಿಬಿಡಬಲ್ಲದು. ವೈರಾಗ್ಯದ ಭಾವ ಮೂಡಿಸಬಲ್ಲದು. ಆದರೆ ಕುರುಕ್ಷೇತ್ರದ ಯುದ್ಧದ ಓದು ಮುಗಿದ ನಂತರ ಅಲ್ಲೊಂದು ಧರ್ಮ ಶಾಂತಿ ಸಂಸ್ಥಾಪನೆಯಾದಂತೆ, ಧರ್ಮ ಗೆದ್ದ ಭಾವ ಕೊಡುತ್ತದೆ. ಅಂತಹ ಶಕ್ತಿ ಇರುವ ಏಕೈಕ ಕಥಾನಕ ಈ ಕುರುಕ್ಷೇತ್ರ ಸಂಗ್ರಾಮದ ಕಥಾಭಾಗ.

ಮೂಲದ ಆಶಯಕ್ಕೆ ಧಕ್ಕೆ ಬರದಂತೆ ಹದಿನೆಂಟು ದಿನಗಳ ಒಟ್ಟಾರೆ ಯುದ್ದದ ಮೊದಲ ಹತ್ತುದಿನಗಳ ವಿವರವನ್ನು ಈ ಪುಸ್ತಕದಲ್ಲಿ ಜತನದಿಂದ ಎತ್ತಿ ತಂದು ಶರ್ಮರು ಈ ಪುಸ್ತಕದಲ್ಲಿ ಓದಿಗೆ ನೀಡುತ್ತಾರೆ. ಮಾಹಿತಿಗಳೇ ತುಂಬಿದ್ದರೂ ಸರಿಯಾದ ಕ್ರಮದಲ್ಲಿ ದಿನವಾರು ವಿಂಗಡಿಸಿ ಬಹಳ ಅಚ್ಚುಕಟ್ಟಾಗಿ ರಣಾಂಗಣದ ಹಣಾಹಣಿಯನ್ನು ಪುಸ್ತಕ ಕಾಣಿಸುವಲ್ಲಿ ಯಶಸ್ವಿಯಾಗಿದೆ. ಪಂಡಿತರಿಗೂ ಮೂಲ ಹುಡುಕುವುದಕ್ಕೆ ಸಮಯವಿಲ್ಲದ ಕೆಲವು ಸಂದರ್ಭಗಳಲ್ಲಿ ತಿರುವಿ ಹಾಕಿ ಮನನ ಮಾಡಿಕೊಳ್ಳುವುದಕ್ಕೆ ಪುಸ್ತಕ ಯೋಗ್ಯವಾಗಿದೆ . ಪಾಮರನಿಗೆ ಹೆಸರಿನಲ್ಲೇ ಇರುವಂತೆ ಕ್ಷಣ ಕ್ಷಣದ ಯುದ್ದರಂಗದ ಮಾಹಿತಿ ನೀಡುತ್ತ ಕಣ್ಣಿಗೆ ಕಟ್ಟುವಂತೆ ಹತ್ತು ದಿನಗಳ ಕದನ ಚಿತ್ರಣವಿದೆ.

ಅದರೊಂದಿಗೆ ಯುದ್ದ ಆರಂಭಕ್ಕೆ ಮುನ್ನ ಹಾಗೂ ನಂತರ ನಡೆದಿರಬಹುದಾದ ಅಗತ್ಯವೆನಿಸಿದ ಪ್ರಮುಖ ಘಟನಾವಳಿಗಳನ್ನು ಕೂಡ ಚಿಂತಿಸಿ ಪುಸ್ತಕದಲ್ಲಿ ಸೇರಿಸುವುದು ಪುಸ್ತಕದ ಮಟ್ಟವನ್ನು ಇನ್ನೊಂದು ಎತ್ತರಕ್ಕೆ ಒಯ್ದಿದೆ. ಯುದ್ದಪೂರ್ವ ಹಾಗೂ ಯುದ್ಧೋತ್ತರ ಎಂಬ ಭಾಗಗಳಾಗಿ ಅವುಗಳನ್ನು ಸೇರಿಸುತ್ತಾ ಸಾಗಿರುವುದು ಯುದ್ಧದ ಮಾಹಿತಿಗಳಿಂದ ಹೊರಳಿ ಯೋಚನೆಗೆ ಈಡು ಮಾಡುವಂತಿರುವುದರಿಂದ ಸೂಕ್ತವಾಗಿದೆ.

ಮಹಾಕಾವ್ಯಗಳ ಓದಿಗೆ ಹೊರಳಿಸುವ ಶಕ್ತಿ ಇರುವ ಶರ್ಮರ ಈ ಹೊತ್ತಗೆ, ಈ ಹೊತ್ತಿಗೆ ಸಾಕಷ್ಟು ಸಂಖ್ಯೆಯ ಓದುಗರನ್ನು ತಲುಪಲಿ, ತಲುಪಬೇಕು ಎಂಬ ಆಶಯದೊಂದಿಗೆ

ಮಂಗಳ.ಟಿ.ಎಸ್
ತುಮರಿ

https://www.facebook.com/share/15ZU95Kb7x/