ಚುರುಕು-ಚಾವಡಿ | Curuku Cāvaḍi
ಪ್ರಾಚೀನ ಸಾಹಿತ್ಯಗಳು ಹುಟ್ಟಿಕೊಂಡಿದ್ದು ಜಿಜ್ಞಾಸುಗಳಿಂದ. ಒಬ್ಬ ಜಿಜ್ಞಾಸು ತನ್ನನ್ನು, ಸೃಷ್ಟಿಯನ್ನು ಶೋಧಿಸಿದಾಗ ದೊರೆತ ಜ್ಞಾನರಾಶಿಯೇ ಪ್ರಾಚೀನ ಸಾಹಿತ್ಯ.
ಋಷಿಗಳ ತಪಸ್ಸೆನ್ನುವ ಪ್ರಶ್ನೆಗೆ ಉತ್ತರ ವೇದ.
ಶಿಷ್ಯನ ಪ್ರಶ್ನೆಗೆ ಗುರುವಿನ ಉತ್ತರ ಉಪನಿಷತ್ತು.
ಋಷಿಗಳ ಜಿಜ್ಞಾಸೆಗೆ ಮಹರ್ಷಿಗಳ ಉತ್ತರ ಪುರಾಣ.
ಹೀಗೆ ಜ್ಞಾನೋದಯವಾಗಿದ್ದು ಪ್ರಶ್ನೋದಯದಿಂದ.
‘ಚುರುಕು ಚಾವಡಿ’ ಧರ್ಮಭಾರತೀ ಮಾಸಪತ್ರಿಕೆಯ ಅಂಕಣ ಬರಹ. ಈ ಕಿರು ಕೃತಿ ಬದುಕಿನಲ್ಲಿ ಬರುವ ಅನೇಕ ಪ್ರಶ್ನೆಗಳಿಗೆ ಚುರುಕಾದ ಉತ್ತರವನ್ನು ನೀಡುತ್ತದೆ. ಆಧುನಿಕ ಕಾಲಕ್ಕೆ ಬೇಕಾದ ತುರ್ತು ಉಪಶಮನವನ್ನು ಮಾತ್ರೆಯಷ್ಟೇ ಪುಟ್ಟದಾದ ಮಾತುಗಳು ನೀಡುತ್ತವೆ ಎನ್ನುವುದು ವಿಶೇಷ.
ಪ್ರಶ್ನೆ: ರಾಮ ನಡೆದ ಹಾದಿಯಲ್ಲೇ ನಡೆದೆ, ನನಗೆ ಲಂಕೆ ಸಿಕ್ಕಿತು.
ಉತ್ತರ: ಸಿಕ್ಕ ರಾವಣನನ್ನು ಕೊಂದು ಬಾ, ಸಿಗಬೇಕಾದ್ದು ಸಿಗುತ್ತದೆ.
ಪ್ರಶ್ನೆ: ಸುಖದ ವಿಳಾಸ ಬಲ್ಲಿರಾ?
ಉತ್ತರ: ಹುಡುಕಲೇನೂ ಕಷ್ಟವಿಲ್ಲ. ದುಃಖ ಗೊತ್ತಲ್.? ಅದರ ಪಕ್ಕದ ಮನೆ.
ಇದು ಕೃತಿಯ ಪ್ರಶ್ನೋತ್ತರಗಳ ಝಲಕ್. ಹೀಗೆ ಓದುಗನಿಗೆ ವಿಶೇಷ ಬೋಧವನ್ನು ಕೊಡುವ ಇಲ್ಲಿಯ ಪ್ರಶ್ನೋತ್ತರಗಳು ಸ್ವಾರಸ್ಯಕರವೂ ಆಗಿವೆ.
- ಲೋಹಿತ ಹೆಬ್ಬಾರ್