Gajanana Sharma
Gajanana Sharma
ವಾಮನಮೂರ್ತಿ ತ್ರಿವಿಕ್ರಮನಾಗಿ ಅರಳಿದ ಘಳಿಗೆ ನಿನ್ನೆ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ಘಟಿಸಿತು!
ಹೌದು, ನಿನ್ನೆ ವರ್ಲ್ಡ್ ಕಲ್ಚರ್ ಸಭಾಂಗಣ ತುಂಬಿ ತುಳುಕಿತ್ತು. ನುರಿತ ವ್ಯವಹಾರ ತಜ್ಞ, ಜಮೀಲ್ ಸಾಹೇಬರು ಹೊರಗೆ ಕುಳಿತು ಟಿ ವಿ ಮೂಲಕ ಸಮಾರಂಭ ನೋಡಲು ವ್ಯವಸ್ಥೆ ಮಾಡಿರದಿದ್ದರೆ ಹಲವರು ಹಾಗೆಯೇ ಹಿಂದಿರುಗಬೇಕಿತ್ತು.
ರುಚಿಕಟ್ಟಾದ ಉಪಹಾರದೊಂದಿಗೆ ನಮಗೆಲ್ಲರಿಗೂ ಹೊಟ್ಟೆಯ ಜೊತೆ ಹೃದಯ – ಮನಸ್ಸುಗಳೂ ತುಂಬಿದವು. ನಾಲ್ವರು ಪ್ರಸಿದ್ಧ ಲೇಖಕರ ಮಹತ್ಕೃತಿಗಳೊಂದಿಗೆ ಮಿತ್ರ ವಿದ್ವಾನ್ ಜಗದೀಶ ಶರ್ಮರ ” ಮಹಾಭಾರತ ಹೇಳಿಯೂ ಹೇಳದ್ದು ” ಸಾಹಿತ್ಯ ಕೃತಿ, ಖ್ಯಾತ ಚಲನ ಚಿತ್ರನಟ ರಮೇಶ ಅರವಿಂದ ಮತ್ತು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ರವರ ಅಮೃತಹಸ್ತದಿಂದ ಲೋಕಾರ್ಪಣೆಗೊಂಡಿತು.
ಜಗದೀಶ ಶರ್ಮರು ಒಬ್ಬ ಅಪ್ರತಿಮ ಸಂಸ್ಕೃತ ಭಾಷಾ ವಿದ್ವಾಂಸ. ಶ್ರೀ ಭಾರತೀ ಪ್ರಕಾಶನದಂತಹ ಸಂಸ್ಥೆಗಳ ಮೂಲಕ ನಾಡಿನ ಹಲವು ಲೇಖಕರ ಇನ್ನೂರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸುವಲ್ಲಿ ಸ್ವತಃ ಮುಂದಾಳತ್ವ ವಹಿಸಿದ ಕರ್ತವ್ಯಶಾಲಿ. ನಾಡಿನ ಎರಡು ಪ್ರಮುಖ ಪತ್ರಿಕೆಗಳಲ್ಲಿ ಅಂಕಣ ಬರೆಯುತ್ತಿರುವ ಅಂಕಣಕಾರ. ಇಷ್ಟೆಲ್ಲದರ ನಡುವೆ ಹಲವು ಕೃತಿಗಳನ್ನು ಸ್ವತಃ ರಚಿಸಿದ ಬರಹಗಾರ. ಅನೇಕ ಕೃತಿಗಳನ್ನು ಸಂಪಾದಿಸಿದ ಚಾಣಾಕ್ಷ ಸಾಹಿತ್ಯಾಸಕ್ತ. ಶ್ರೀರಾಮಚಂದ್ರಾಪುರ ಮಠದ “ಧರ್ಮಭಾರತೀ” ಮಾಸ ಪತ್ರಿಕೆಯನ್ನು ಎರಡು ದಶಕಗಳಿಗೂ ಹೆಚ್ಚುಕಾಲದಿಂದ ಸುಸಂಪನ್ನತೆಯಿಂದ ನಡೆಸಿಕೊಂಡು ಬಂದ ನುರಿತ ಸಂಪಾದಕ.
ಇಷ್ಟೆಲ್ಲದರ ನಡುವೆ ಆಧುನಿಕ ಸಾಹಿತ್ಯದ ಕುರಿತೂ ಇವರ ಓದಿನ ಹರಹು ವಿಶಾಲ. ಅಡಿಗರಿಂದ ಬೇಂದ್ರೆಯವರೆಗೆ, ಕಾರಂತರಿಂದ ಭೈರಪ್ಪರವರೆಗೆ ಎಲ್ಲರ ಕೃತಿಯನ್ನು ಒಳಹೊಕ್ಕು, ತಳಮಟ್ಟದ ವಿಮರ್ಶೆಗಿಳಿಯಬಲ್ಲ ಸಾಮರ್ಥ್ಯ ಶರ್ಮರದ್ದು. ರಾಮಾಯಣ ಮತ್ತು ಮಹಾಭಾರತಗಳ ಕುರಿತು ಶರ್ಮರೊಂದು ಜ್ಞಾನಭಂಡಾರ. ನಿನ್ನೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜೋಗಿಯವರು ಹೇಳಿದಂತೆ, ಅವರಂತಹ ಅನೇಕ ಖ್ಯಾತ ಸಾಹಿತಿಗಳಿಗೂ ಜಗದೀಶ ಶರ್ಮರು ಸಂಸ್ಕೃತದ ಕುರಿತು ಒಬ್ಬ ಸಂಪನ್ಮೂಲ ವ್ಯಕ್ತಿ ಮತ್ತು ಆಕರ.
ಇಷ್ಟಾಗಿಯೂ ಶರ್ಮರು ಇತ್ತೀಚಿನವರೆಗೂ ತಮ್ಮನ್ನು ತೆರೆದುಕೊಂಡಿದ್ದು ಒಂದು ಸೀಮಿತ ವಲಯಕ್ಕೆ ಮಾತ್ರ. ತಮ್ಮೊಳಗೆ ತ್ರಿವಿಕ್ರಮ ಶಕ್ತಿ ಅಡಗಿದ್ದರೂ, ಅದನ್ನು ಹೊರಜಗತ್ತಿಗೆ ತೋರ್ಪಡಿಸಿಕೊಳ್ಳದೇ ತನ್ನೊಳಗೇ ಮುಳುಗಿದ್ದ ಈ ವಾಮನಮೂರ್ತಿ ಕಳೆದ ಒಂದೆರಡು ವರ್ಷದಿಂದಷ್ಟೇ, ಜೋಗಿ, ಕುಂಟಿನಿ, ವಿನಾಯಕ ಭಟ್ಟರು ಮುಂತಾದ ಗಣ್ಯ ಸ್ನೇಹಿತರ ಮೂಲಕ ತಮ್ಮ ಸೀಮಿತ ಚೌಕಟ್ಟಿನಿಂದಾಚೆಗೆ ಚಾಚಿಕೊಳ್ಳತೊಡಗಿದವರು. ಸಣ್ಣಕಥೆಗಳ ಕುರಿತೂ ತಮ್ಮ ವಿಮರ್ಶೆಯ ಛಾಪನ್ನು ಒತ್ತಿ, ಗಮನ ಸೆಳೆದವರು.