Gopalakrishna Kuntini
Gopalakrishna Kuntini

ಡಿಯರ್ Jagadisha Sharma Sampa

ನಿಮ್ಮ’ಮಹಾಭಾರತ ಅನ್ವೇಷಣೆ’ ಓದಿದೆ.

ಮಹಾಭಾರತ ಎಂದರೆ ಹಾಗೇ, ಪ್ರಶ್ನೆ ಮತ್ತು ಉತ್ತರ ಮತ್ತೆ ಪುನಃ ಪ್ರಶ್ನೆ ಮತ್ತು ನಿರುತ್ತರ.
ನೀವು ಮಹಾಭಾರತದ ಕುರಿತ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದೀರಿ, ಸಂದೇಹಗಳನ್ನು ಮುನ್ನೆಲೆಗೆ ತಗೊಂಡು ಪರಿಹರಿಸಲು ಯತ್ನಿಸಿದ್ದೀರಿ.
ಮಹಾಭಾರತ ಇಲ್ಲಿಗೇ ಮುಗಿಯುವುದಿಲ್ಲ. ಮುಗಿಯಲೇಬಾರದು ಎಂದೇ ಮಹಾಕಾವ್ಯವನ್ನು ವ್ಯಾಸರು ಬರೆದುಕೊಟ್ಟಿದ್ದಾರೆ. ಅದರ ಕುರಿತಾಗಿ ಪುನಃಪುನಃ ಸೃಷ್ಟಿಗಳು ನಡೆಯುತ್ತಿರುವುದನ್ನು ನೋಡಬೇಕೆಂದೇ ಅವರು ಚಿರಂಜೀವಿಯಾಗಿದ್ದಾರೆ.
ಮಹಾಕಾವ್ಯಕ್ಕೇ ಸಾವಿಲ್ಲ, ಇನ್ನು ಕವಿಗೆ ಸಾವೇ? ಖಂಡಿತಾ ಇಲ್ಲ.

ಧರ್ಮೇ ಚಾರ್ಥೇ ಚ ಕಾಮೇ ಚ ಮೋಕ್ಷೇ ಚ ಭರತರ್ಷಭ..ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ನ ತತ್ಕ್ವ ಚಿತ್..
ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳ ಕುರಿತು ಇದರಲ್ಲಿರುವವು ಬೇರೆಕಡೆಯೂ ಇವೆ. ಆದರೆ ಇಲ್ಲಿ ಇಲ್ಲದೇ ಇರುವುದು ಬೇರೆಲ್ಲಿಯೂ ಇಲ್ಲ ಎಂದು ಹೇಳಿದ್ದು ವೈಶಂಪಾಯನ.
ಅದೂ ಕೊನೆಗೆ. ಮುಕ್ತಾಯದ ಪುಟದಲ್ಲಿ.

ಇಲ್ಲಿ ಇರುವುದು ಎಲ್ಲೆಡೆ ಇದೆ,ಇಲ್ಲಿ ಇರದಿರುವುದು ಇನ್ನೆಲ್ಲೂ ಇಲ್ಲ ಎಂಬುದೇ ಈ ಮಹಾಕಾವ್ಯದ ಶ್ರೇಷ್ಠತೆ. ಅದನ್ನು ಹೇಳಿಕೊಂಡಿರುವುದು ಮತ್ತು ಅದು ಸತ್ಯವೂ ಆಗಿರುವುದು.
ನೀವು ಮಹಾಭಾರತದ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸತೊಡಗಿದ್ದೀರಿ.ವ್ಯಾಸರು ಹೇಳುತ್ತಿರುವುದು ಏನು ಎಂಬುದನ್ನು ಸರಳವಾಗಿ ವಿವರಿಸುತ್ತಿದ್ದೀರಿ.ಮಹಾಭಾರತ ಬರೆಯಲು ಇಂತಹ ಕಾರಣವೇನೂ ಇರಲಿಲ್ಲ ಎಂದು ನೀವು ಒಂದೆಡೆ ಉತ್ತರಿಸುತ್ತೀರಿ. ಅದು ಅರ್ಧ ಸತ್ಯ. ಮಹಾಕಾವ್ಯ ರಚನೆಗೆ ಒಂದಾನೊಂದು ಕಾರಣ ಇರಲೇಬೇಕು. ನೀವು ಹೇಳುತ್ತಿರುವ ಪರಪ್ರೇರಣೆ ಮತ್ತು ಸ್ವಯಂಪ್ರೇರಣೆ ಆಚೆಗೆ ಇನ್ನೇನೋ ಇದೆ ಎಂದು ನಿಮಗೆ ಗೊತ್ತಿರಬೇಕು. ಅದನ್ನು ನೀವು ಮತ್ತಷ್ಟು ವಿಸ್ತರಿಸಬೇಕು.
ಬಹಳಷ್ಟು ಪ್ರಶ್ನೆಗಳಿಗೆ ನೀವು ಕೊಡುತ್ತಿರುವ ಉತ್ತರ ಸೃಜನಶೀಲವೂ ಹೊಸಹೊಳಹಿನಿಂದಲೂ ಕೂಡಿವೆ. ಉದಾಹರಣೆಗೆ ಕುಂತಿ ಮೊದಲ ಬಸುರನ್ನು ಮುಚ್ಚಿಟ್ಟುಕೊಂಡದ್ದು. ಅರಮನೆಯ ಗುಟ್ಟು ಅದೆಂದು,ಆ ಗುಟ್ಟನ್ನು ಕುಂತಿ ಅರಮನೆಯಿಂದಲೂ ಬಚ್ಚಿಟ್ಟುಕೊಂಡಿದ್ದನ್ನೂ ನೀವು ನಿಮ್ಮದೇ ಶೈಲಿಯಲ್ಲಿ ಸುರಳೀತವಾಗಿ ವಿವರಿಸಿದ್ದೀರಿ.

ಮೂಲಮಹಾಭಾರತ ಯಾವುದು ಎಂದು ಮಹಾಭಾರತದ ಕಾಲದಿಂದಲೇ ಜಿಜ್ಞಾಸೆ ಎದ್ದಿರಬಹುದು.
ವೈಶಂಪಾಯನು ಹೇಳಿದ್ದು,ಜನಮೇಜಯ ಕೇಳಿಸಿಕೊಂಡಿದ್ದು ಮೊದಲ ಮಹಾಭಾರತ. ಅಲ್ಲಿ ವ್ಯಾಸರಿದ್ದರು.
ಮಹಾಭಾರತದ ಎರಡನೇ ಪ್ರಕಟಣೆ ಆಗಿದ್ದು ಉಗ್ರಶ್ರವನೆಂಬ ಸೂತಪುರಾಣಿಕನು ನೈಮಿಷಾರಣ್ಯದಲ್ಲಿ ಶೌನಕ ಕುಲಪತಿಯ ಆಶ್ರಮದಲ್ಲಿ ಕತೆ ಹೇಳುವುದರ ಮೂಲಕ. ಅಲ್ಲಿ ವ್ಯಾಸರಿರಲಿಲ್ಲ.
ಮುಂದೆ ಇಂಥ ನೂರು, ಸಾವಿರ,ಲಕ್ಷ ಸೂತ ಪುರಾಣಿಕರು ಮಹಾಭಾರತದ ಕತೆ ಹೇಳುತ್ತಾ ಹೋದರು. ಜನಮಾನಸ ಕೇಳುತ್ತಾ ಹೋಯಿತು.ಎಲ್ಲೆಲ್ಲಿ ಯಾರು ಯಾರು ಯಾವುದೆಲ್ಲಾ ಬಗೆಯಲ್ಲಿ ಯಾರಿಗೆಲ್ಲಾ ಕತೆ ಹೇಳಿದರು ಎಂಬುದನ್ನು ಆಧರಿಸಿ ಮಹಾಭಾರತದ ಆವೃತ್ತಿಗಳು ನಿರ್ಧಾರವಾಗುತ್ತವೆ.

ಮಹಾರಾಜನ ಆಸ್ಥಾನದಲ್ಲಿ ಹೇಳುವ ಕತೆಗೂ, ಪಂಡಿತೋತ್ತಮರ ಸಭೆಯಲ್ಲಿ ಹೇಳುವ ಕತೆಗೂ,ಜನಪದರ ನಡುವೆ ಹೇಳಲಾದ ಕತೆಗೂ ಒಂದೇ ಧಾಟಿ, ಒಂದೇ ಲಯ, ಒಂದೇ ತೂಕ ಇರಲಾರದು. ಹಾಗೇ ಕಾಲದಿಂದ ಕಾಲಕ್ಕೆ ಸಾಂಸ್ಕೃತಿಕ, ಸಾಮಾಜಿಕ,ರಾಜಕೀಯ ನೆಲೆಗಳಿಗೆ ತಕ್ಕುದಾಗಿ ಕತೆ ಹೇಳಿರಬಹುದು. ಆ ಶತಮಾನದ ಕತೆ ಮುಂದಿನ ಶತಮಾನಕ್ಕೆ ಹಾಗೇ ಸಾಗಿರದೇ ಇರಬಹುದು. ಉತ್ತರದೇಶದಲ್ಲಿ ಹೇಳಿದ ಕತೆ ದಕ್ಷಿಣದಲ್ಲಿ ಸಮಾನವಾಗಿರದೇ ಹೋಗಿರಬಹುದು. ಹೀಗಾಗಿ ಮೂಲ ಯಾವುದು ಮತ್ತು ಅದರ ವಿಸ್ತಾರ ಯಾವುದು ಎಂದು ಪತ್ತೆ ಹಚ್ಚುವುದು ಸಾಹಸವೇ. ಆದರೆ ಒಂದಂತೂ ನಿಜ, ಮಹಾಭಾರತ ಮೂಲದಿಂದ ಮುಂದೆ ಸಾಗಿರಬಹುದು,ಆದರೆ ಮೂಲವನ್ನು ಧಿಕ್ಕರಿಸಿ ಮಹಾಭಾರತ ಅಲ್ಲ ಮತ್ತು ಇಲ್ಲ.

ಈ ಕೃತಿಯಲ್ಲಿ ಹಲವಾರು ಪ್ರಶ್ನೆಗಳಿವೆ, ಅವುಗಳಿಗೆ ನೀವು ಸಮರ್ಥ ರೀತಿಯಲ್ಲಿ ಉತ್ತರ ಕೊಟ್ಟಿದ್ದೀರಿ. ಕೆಲವೆಡೆ ಉತ್ತರಗಳು ಸುದೀರ್ಘವಾದವೋ ಎಂದನಿಸಿತು ಮತ್ತು ಕೆಲವೊಮ್ಮೆ ಅಷ್ಟು ಹೇಳುವುದು ಅಗತ್ಯವೂ ಇರಬಹುದೇನೋ ಎಂದೂ ಕಂಡಿತು.
ಪ್ರಶ್ನೆಗಳನ್ನು ಕೇಳಿದವರ ಹೆಸರೂ ಇರಬೇಕಿತ್ತು ಮತ್ತು ಕೃತಿಯಲ್ಲಿ ಅನುಬಂಧದ ಅಗತ್ಯ ಇರಲಿಲ್ಲ ಎಂಬುದು ನನ್ನ ಖಾಸಗಿ ಅಭಿಪ್ರಾಯ.

ಹೀಗೇ ಬರೆಯುತ್ತಿರಿ, ಮಹಾಭಾರತ ನಿಮ್ಮದಾದಂತೆ,ಎಲ್ಲರದ್ದೂ ಆಗಲಿ.