ಗೋಪಾಲಕೃಷ್ಣ ಕುಂಟಿನಿ.
ಗೋಪಾಲಕೃಷ್ಣ ಕುಂಟಿನಿ.

ಗೆಳೆಯ ಜಗದೀಶ ಶರ್ಮಾ ಮಹಾಭಾರತದ ಒಳಗೆ ಹೊಕ್ಕವರು ಇನ್ನೂ ಹೊರಬಂದಂತಿಲ್ಲ. ಸದ್ಯಕ್ಕೆ ಅವರು ಬರುವುದೂ ಇಲ್ಲ. ಅಧ್ಯಯನಶೀಲತೆ ಒಂದು ಮಹಾಕೃತಿಯನ್ನು ಹಾಗೇ ಒಳಗೊಳಿಸುತ್ತದೆ. ಅಥವಾ ಇದನ್ನು ಹೀಗೂ ಹೇಳಬಹುದು, ತನ್ನೊಳಗೆ ಬಂದ ನಿಜದ ಓದುಗನನ್ನು ಮಹಾಕೃತಿ ಬೀಳ್ಕೊಡುವುದೇ ಇಲ್ಲ.
‘ಕುಂತಿ ಪಾಂಡು’ ಪುಸ್ತಕ ಓದಿದೆ. ಮಹಾಭಾರತದಲ್ಲಿ ಮರೆಯಲಾಗದ ಎರಡು ಪಾತ್ರಗಳಿವು. ಗಂಡ ಹೆಂಡತಿ. ಇಬ್ಬರನ್ನೂ ಸಾಯುವ ತನಕ ಕಾಡಿದ ದ್ವಂದಗಳು. ಯಾವುದು ಸರಿ ಯಾವುದು ತಪ್ಪು ಎಂದು ಗೊತ್ತೇ ಆಗದೆ ಅವರಿಬ್ಬರೂ ಬದುಕಿದರು. ಕುಂತಿಗೆ ತನ್ನ ದ್ವಂದ ಬಗೆಹರಿಯುವ ಹೊತ್ತಿಗೆ ಪ್ರಳಯವೇ ಆಗಿತ್ತು. ಅಲ್ಲಿ ಯಾರೂ ಉಳಿದಿರದ ಹೊತ್ತಿನಲ್ಲಿ ನಿನ್ನದೇನೂ ತಪ್ಪಿಲ್ಲ ಎಂದು ಹೇಳಿದ್ದು ಕವಿ. ಅದೇ ಮಹಾಕಾವ್ಯದ ಕವಿ. ಅದನ್ನು ಅದೆಂದೋ ಮೊದಲಲ್ಲೇ ಹೇಳಬಹುದಿತ್ತಲ್ಲ? ಹೇಳಲಿಲ್ಲ. ಯಾಕೆ ಹೇಳಬೇಕು? ಮಹಾಕತೆ ಮುಂದೆ ಸಾಗಿಸುತ್ತಾ ಅದನ್ನು ಮತ್ತಷ್ಟು ಆಪ್ಯಾಯಮಾನಗೊಳಿಸುತ್ತಾ, ರೋಚಕಗೊಳಿಸುತ್ತಾ ಓದುಗನನ್ನು ಕಾಡಿಸುತ್ತಾ ಹೋಗುವ ಹೊತ್ತಿಗೆ ಕುಂತಿಯನ್ನು ಹೊರತಂದುಬಿಟ್ಟರೆ ಅದು ಕಾವ್ಯಕ್ಕೆ ಸುಖವೆನಿಸದು. ಅದಕ್ಕೆ ಕವಿ ಸುಮ್ಮನಿದ್ದಿರಬೇಕು.
ಪಾಂಡುವಿನ ತಪ್ಪು ಅವನನನ್ನು ಆಪೋಶನ ತೆಗೆದುಕೊಂಡಿತ್ತು. ಇಷ್ಟಕ್ಕೂ ಪಾಂಡು ಏನು ತಪ್ಪು ಮಾಡಿದ್ದ? ಕಿಂದಮ ದಂಪತಿ ಜಿಂಕೆಗಳಾಗಿ ಬಯಲಲ್ಲಿ ರತಿಯಾಡಿದರೆ ಆಡುತ್ತಿರುವುದು ಜಿಂಕೆಯಲ್ಲ, ಋಷಿ ದಂಪತಿ ಎಂದು ಪಾಂಡುವಿಗೆ ಹೇಗೆ ಗೊತ್ತಾಗಬೇಕು. ಆದರೆ ತಪ್ಪು ಇರುವುದು ಜಿಂಕೆಯನ್ನು ಹೊಡೆದುದರಲ್ಲಿ ಅಲ್ಲ. ರತಿಯ ಉತ್ತುಂಗವನ್ನು ಕಡಿದುದರಲ್ಲಿ. ಅದು ಶಾಪ. ಮೈಥುನವೆಂಬ ಸೃಷ್ಟಿಕ್ರಿಯೆ, ಪ್ರಕೃತಿಸಹಜ ಸ್ಥಿತಿಯನ್ನು ಅಪ್ರಾಕೃತಿಕಗೊಳಿಸಿದರೆ, ನಾಶಮಾಡಿದರೆ ಶಾಪ ನಿಶ್ಚಿತ. ಆ ಶಾಪ ಕೂಡಾ ಅದೇ ಅವನ ಮೈಥುನದ ಹೊತ್ತಿಗೆ ನಿಜವಾಗಿ ಹೋಯಿತು.
ಕುಂತಿ ಮತ್ತು ಪಾಂಡು ಇಂಥ ಅನ್ವೇಷಣೆಗಳ ಕೃತಿ. ಜಗದೀಶ ಶರ್ಮಾ ಎರಡೂ ಪಾತ್ರಗಳನ್ನು 117 ಪುಟಗಳಲ್ಲಿ ಬಿಡಿಸಿದ್ದಾರೆ, ಮರೆಯಲಾಗದಂತೆ.
ಥಾಂಕ್ಯೂ ಗೆಳೆಯಾ, ಫೆಬ್ರವರಿಯಲ್ಲಿ ಕುರುಕ್ಷೇತ್ರದಲ್ಲಿ ಸಿಗೋಣ.