ಗುರುಪ್ರಸಾದ್ ಆಚಾರ್ಯ
ಗುರುಪ್ರಸಾದ್ ಆಚಾರ್ಯ

ಓದಿ ಮುಗಿಸಿದ ಪುಸ್ತಕ : ‘ ಧರ್ಮ ‘ ಒಳಹೊರಗಿನ ಬೆಳಕಿಗೆ; ಬವಣೆಯಿಲ್ಲದ ಬದುಕಿಗೆ

ಲೇಖಕರು : ಜಗದೀಶ ಶರ್ಮಾ ಸಂಪ

ಪ್ರಕಾಶನ : ಸಾವಣ್ಣ ಎಂಟರ್ಪ್ರೈಸಸ್

ಧರ್ಮ ಅನ್ನುವ ಶೀರ್ಷಿಕೆ ನೋಡಿ.. ಅರೆ ಧರ್ಮದ ಬಗೆಗೆ ಇಷ್ಟು ಸಣ್ಣ ಪುಸ್ತಕವೇ..? ಅಂತ ಗೊಂದಲ ಸುರುವಾಗಿತ್ತು.. ಪುಸ್ತಕದಲ್ಲೇ ಇರುವಂತೆ ಒಂದು ಗಂಟೆಯ ಸಮಯದಲ್ಲಿ ಓದಿ ಮುಗಿಸಬಹುದಾದ ಪುಸ್ತಕ.. ( ನಮ್ಮ ಸ್ಪೀಡಿಗೆ ಇನ್ನೊಂದು ತಾಸು ಹೆಚ್ಚೇ ತೆಗೆದುಕೊಂಡೆ ಅನ್ನೋದು ನಮ್ಮ ವೈಫಲ್ಯ ಬಿಡಿ ) ವಾಸ್ತವದಲ್ಲಿ ಇದು ಮನು ಹೇಳಿದ

ಧೃತಿ ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯ ನಿಗ್ರಹಃ |

ಧೀರ್ವಿದ್ಯಾ ಸತ್ಯಮಕ್ರೋಧಃ ದಶಕಂ ಧರ್ಮ ಲಕ್ಷಣಮ್ ||

ಅನ್ನುವ ಒಂದು ಶ್ಲೋಕದ ವಿಸ್ತಾರ ರೂಪ… ಧರ್ಮಕ್ಕೆ ಸ್ಥೈರ್ಯ, ಕ್ಷಮೆ, ಇಂದ್ರಿಯಸಂಯಮ, ಪ್ರಾಮಾಣಿಕತೆ, ಶುದ್ಧಿ, ಮನಃಸಂಯಮ, ವಿವೇಕ , ವಿದ್ಯೆ, ಸತ್ಯ ಮತ್ತು ಪ್ರೀತಿ ಈ ಹತ್ತು ಧರ್ಮದ ಲಕ್ಷಣಗಳು ಅನ್ನುವುದನ್ನ ಒಂದು ಮಿತಿಯೊಳಗೆ ಹಲವು ನೀತಿಕತೆಗಳ ಮೂಲಕ ವಿವರಿಸಿದ್ದಾರೆ.. ಬಾಲ್ಯದ ಕೇಳಿದ್ದ ಓದಿದ್ದ ಕತೆಗಳಾದ ಆಮೆ ಮತ್ತು ಹಂಸಗಳ ಕತೆ, ಚೇಳು ಮತ್ತು ಸನ್ಯಾಸಿಯ ಕತೆ, ಮೂರ್ತಿ ಹಾಗು ಗುಡಿಯ ಮೆಟ್ಟಿಲ ಕತೆ, ಮೂರು ಕೊಡಲಿಯ ಕತೆ, ಬಕ ಪಕ್ಷಿ , ಮೀನು ಮತ್ತು ಏಡಿಯ ಕತೆಗಳ ಮೂಲಕ ವಿವರಿಸಿದ್ದಾರೆ.. ಒಟ್ಟಿನಲ್ಲಿ ಒಂದಷ್ಟು ನೀತಿಕತೆಗಳ ಮೂಲಕ ಧರ್ಮದ ಸ್ವರೂಪವನ್ನು ನಾವು ಅಳವಡಿಸಿಕೊಳ್ಳಬೇಕಾದ ಗುಣಗಳನ್ನು ಹೇಳುತ್ತದೆ ಈ ಪುಸ್ತಕ..

ಖುಷಿ ಕೊಟ್ಟ ಸಾಲುಗಳು..

ಬದುಕು ಹೂವಿನ ದಾರಿಯಲ್ಲ. ಅಲ್ಲಿ ಕಲ್ಲು ಮುಳ್ಳುಗಳನ್ನೂ ನಿರೀಕ್ಷಿಸಬೇಕು. ಹೂವು ಬಂದಾಗ ಸಂತಸ. ಕಲ್ಲು ಮುಳ್ಳಿನಲ್ಲಿ ಸಂಯಮ. ಹೀಗಿರಬೇಕು ಮನೋಭಾವ. ಸುಖ ಸಿಕ್ಕಾಗ ಖುಷಿಯಾಗುತ್ತೀರಿ. ನೋವಲ್ಲಿ ನರಳುತ್ತೀರಿ. ಎಂದಾದಮೇಲೆ ಖುಷಿಯಾಗುವುದು ನೋಯುವುದು ಅಧರ್ಮ ಎಂದಾಯಿತಲ್ಲ. ನಿಮ್ಮಲ್ಲಿ ಇರಬೇಕಾದ್ದು ಧರ್ಮವಲ್ಲವೇ? ಅಧರ್ಮಕ್ಕೆ ಏಕೆ ಎಡೆಯಾಗುತ್ತೀರಿ?

ಸರಿ ತಪ್ಪುಗಳ; ಸಾಧ್ಯ ಅಸಾಧ್ಯತೆಗಳ; ನ್ಯಾಯ ಅನ್ಯಾಯಗಳ; ಧರ್ಮ ಅಧರ್ಮಗಳ; ಅನುಕೂಲ ಪ್ರತಿಕೂಲಗಳ ಅರಿವು ಬೇಕು. ಅದು ಸಮಗ್ರ ಅರಿವು. ಅದೇ ವಿವೇಕ.

ಒಂದು ವಸ್ತುವಿನ ಆಳ, ಅಗಲ, ಎತ್ತರ ಎಲ್ಲ ಗೊತ್ತಾಗಬೇಕು. ಅದು ವಿವೇಕ. ವಸ್ತುವಿನ ಸ್ವರೂಪ ಇಂಥದೇ ಎಂದು ಅರಿವಾದರೆ ಅದು ವಿವೇಕ. ಇದಲ್ಲ, ಇದಲ್ಲ ಎಂದು ಬೇರ್ಪಡಿಸುತ್ತಾ ಇದೇ ಇದು ಎಂದು ಗೊತ್ತುಮಾಡಿಕೊಳ್ಳುತ್ತೀರಲ್ಲ ಅದು ವಿವೇಕ.

ಹೆಚ್ಚು ವಿಷಯ ತಿಳಿದಿರುವುದು ವಿವೇಕವಲ್ಲ ತಿಳಿದಿರುವುದನ್ನು ಬಳಸಲು ತಿಳಿದರೆ ಅದು ವಿವೇಕ.

ಸೃಷ್ಟಿಯ ನಿಯಮಕ್ಕೂ ಸತ್ಯ ಎಂದು ಕರೆಯಲಾಗಿದೆ. ಯಾಕೆಂದರೆ ಸದಾ ಹಾಗೆಯೇ ಇರುತ್ತದೆಯಾದ್ದರಿಂದ. ಆ ನಿಯಮಕ್ಕೆ ಎಂದರೆ ಶಾಸ್ತ್ರಕ್ಕೆ ಎಂದರೆ ಜ್ಞಾನ ವಿಜ್ಞಾನಕ್ಕೆ ಅನುಗುಣವಾಗಿ ಬದುಕುವುದು ಧರ್ಮ.