ಗುರುರಾಜ ಕೊಡ್ಕಣಿ
ಗುರುರಾಜ ಕೊಡ್ಕಣಿ
ತೀರ ಮೊನ್ನೆ ಯಾವುದೋ ಕಾರ್ಯಕ್ರಮದಲ್ಲಿ ಜಮೀಲ್ ಸರ್ ಸಿಕ್ಕಿದ್ದರು. ಮಾತಿನ ನಡುವೆ ‘ ಇನ್ನಷ್ಟು ಹೊಸ ಓದುಗರನ್ನ ಕನ್ನಡಕ್ಕೆ ಸೆಳೆಯುವ ಪ್ರಯತ್ನಕ್ಕೆ ಹೊಸದೊಂದು ಯೋಜನೆ ನಿರೂಪಿಸಿದ್ದೀನಿ ಸರ್ ‘ ಎಂದಿದ್ದರು. ಅಂಥದ್ದೇನು ಯೋಜನೆ ಎಂದು ಕುತೂಹಲದಲ್ಲಿದ್ದವನಿಗೆ ಅವರು ತೋರಿಸಿದ್ದು ತಮ್ಮ ಮೊಬೈಲ್ ಪೋನಿನಲ್ಲಿದ್ದ Jagadisha Sharma Sampa ಪುಸ್ತಕದ ಮುಖಪಟಗಳ ಚಿತ್ರ. ‘ ಜಸ್ಟ್ 1 ಗಂಟೆ’ ಎಂಬ ಸರಣಿಯಡಿ ಪ್ರಕಟವಾಗಿರುವ ಆರು ಪುಸ್ತಕಗಳಿವು. ‘ಧರ್ಮ’ ‘ಚಾಣಕ್ಯ’ ‘ಭಗವದ್ಗೀತೆ’ ’24 ಗುರುಗಳು ‘ ‘ಯಕ್ಷಪ್ರಶ್ನೆ’ ‘ ಆತ್ಮಗುಣ’ ಎನ್ನುವ ಹೆಸರಿನ ಪುಟ್ಟಪುಟ್ಟ ಪುಸ್ತಕಗಳು.
ಪುಸ್ತಕ ಖರೀದಿಸಿ ತಡವಾಗಿ ಹಾಲ್ ಒಳಹೊಕ್ಕವನಿಗೆ ಕೂರಲು ಜಾಗವಿಲ್ಲ. ಒಂದಷ್ಟು ಹೊತ್ತು ಸ್ನೇಹಿತರೊಂದಿಗೆ ಹರಟಿ ಆಟೋ ಹತ್ತಿದೆ. ಆಟೊದಿಂದ ಮನೆಗೆ ಹದಿನೈದಿಪ್ಪತ್ತು ನಿಮಿಷಗಳು. ಅಷ್ಟರಲ್ಲಾಗಲೇ ಮೊದಲ ಪುಸ್ತಕ ಮುಗಿದಿತ್ತು.
ಹಿಂದೆಯೂ ಲೇಖಕರ ಪುಸ್ತಕವನ್ನು ಓದಿದ್ದೇನೆ. ತುಂಬ ಸರಳವಾಗಿ ಬರೆಯುತ್ತಾರೆ ಸಂಪ. ಧರ್ಮ ಎನ್ನುವ ಸಂಕೀರ್ಣ ವಸ್ತುವನ್ನು ಎತ್ತಿಕೊಂಡು ಸರಳವಾಗಿ ಒಂದಷ್ಟು ವಿಷಯಗಳನ್ನು ವಿವರಿಸಿದ್ದಾರೆ ಇಲ್ಲಿ.ಧರ್ಮವೆಂದರೆ ಸ್ಥಿರತೆಯಿಂದ ಶುರುವಾಗಿ ವಿವೇಕದತ್ತ ಸಾಗಿ, ಧೈರ್ಯದತ್ತ ನಡೆದು,ಕ್ಷಮೆಯತ್ತ ತಿರುಗಿ,ಸಂಯಮ, ಪ್ರಾಮಾಣಿಕತೆ ,ಶುದ್ದಿ ,ವಿವೇಕ, ವಿದ್ಯೆ ,ಸತ್ಯ, ಪ್ರೀತಿಯಂಥಹ ಹಲವಾರು ಇತ್ಯಾತ್ಮಕ ಅಂಶಗಲ ಸಮಷ್ಟಿ ಎನ್ನುವುದನ್ನು ಓದಿಕೊಳ್ಳುವಾಗ ಓದುಗನಿಗೆ ‘ ಧರ್ಮ’ದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಮೂಡುವುದಂತೂ ಹೌದು.
ಇದಾದ ನಂತರ ಕೈಗೆತ್ತಿಕೊಂಡಿದ್ದು ‘ ಭಗವದ್ಗೀತೆ’ ಯ ಕುರಿತಾದ ಪುಸ್ತಕ. ಪ್ರತಿ ಮನುಷ್ಯನಲ್ಲೂ ಒಂದು ಆಂತರಿಕ ಕದನವಿದೆ. ತುಂಬ ಬಾರಿ ಮನುಷ್ಯ ಮೊದಲು ಸೋಲುವುದೇ ಈ ಸಮರದಲ್ಲಿ . ಆ ಒಳಗಿನ ಯುದ್ಧ ಗೆಲ್ಲದೆ ಹೊರಗೆ ಯುದ್ಧ ಮಾಡಲಾಗದು ಗೆಲ್ಲಲಾಗದು.ಬದುಕಿನ ವಿಷಾದವನ್ನು ಮೀರಿ ಬದುಕು ಗೆಲ್ಲುವ ಮಾರ್ಗವನ್ನು ಗೀತೆ ವಿವರಿಸಿದ್ದರೆ ,ಗೀತೆಯಲ್ಲಿನ ಕೆಲವಾರು ಅಂಶಗಳನ್ನ ಸಣ್ಣಸಣ್ಣ ಕತೆಗಳ ರೂಪದಲ್ಲಿ ಇಲ್ಲಿ ವಿವರಿಸುವ ರೀತಿ ಚಂದ. ಬಹುಶಃ ಇದನ್ನೋದಿದವರಿಗೆ ಗೀತೆಯ ಬಗ್ಗೆ ಒಂದು ಸಹಜಾಸಕ್ತಿ ಹುಟ್ಟುವುದು ಸುಳ್ಳಲ್ಲ ಬಿಡಿ.
ಓದಿದ ಮೂರು ಪುಸ್ತಕಗಳ ಪೈಕಿ ತುಂಬ ಇಷ್ಟವಾಗಿದ್ದು ‘ಚಾಣಕ್ಯ’, ಚಣಕನ ಮಗ ಚಾಣಕ್ಯ, ಯಾವ ರಾಜ್ಯಕ್ಕೂ ರಾಜನಲ್ಲದ ಚಂದ್ರಗುಪ್ತನನ್ನು ಮುಂದಿಟ್ಟುಕೊಂಡು ಅಲೆಕ್ಸಾಂಡರ್ ನನ್ನು ಹಿಮ್ಮೆಟ್ಟಿಸಿಬಿಡುತ್ತೆ, ಭಾರತದ ಅಸ್ಮಿತೆ ಕಾಪಾಡಿಕೊಳ್ಳುತ್ತಾನೆ ಇಂಥ ಚಾಣಿಕ್ಯನ ನೀತಿಸೂತ್ರ ಮತ್ತು ಅರ್ಥಶಾಸ್ತ್ರಗಳ ಆಕರವಿಟ್ಟುಕೊಂಡು ಚಾಣಕ್ಯನನ್ನು ಪರಿಚಯಿಸುವ ಪುಟ್ಟ ಕೃತಿಯಿದು. ,’ಬಾಲಿಶರು ಕೆಲಸ ಕೆಟ್ಟರೆ ದೋಷಾರೋಪ ಮಾಡುತ್ತಾರೆ..’ಹೆದರುವವಗೆ ಕಾರ್ಯದ ಯೋಚನೆ ವ್ಯರ್ಥ’ ಎನ್ನುವ ಬರಹಗಳು ತ ಇಷ್ಟವಾದವು. ಕೌಟಿಲ್ಯನ ರಾಜ್ಯತಂತ್ರದ ಕಿರು ಸಾರಾಂಶ ಇಲ್ಲಿದೆ. ಚಾಣಕ್ಯನ ಒಂದಷ್ಟು ಚಂದದ ಮಾತುಗಳೂ ಇವೆ. ವೈಯಕ್ತಿಕವಾಗಿ ಚಾಣಕ್ಯನ ಬಗೆಗೆ ತುಂಬ ಗೊತ್ತಿಲ್ಲದ ನನಗೆ ಖಂಡಿತವಾಗಿ ಚಾಣಿಕ್ಯನ ಪೂರ್ತಿ ನೀತಿಯನ್ನು ಓದಿ ತಿಳಿದುಕೊಳ್ಳುವ ಮಟ್ಟಿಗೆ ಆಸಕ್ತಿಯನ್ನು ಈ ಪುಸ್ತಕ ಹುಟ್ಟಿಸಿದೆ.
ಒಟ್ಟಾರೆಯಾಗಿ ಹೇಳುವುದಿಷ್ಟೇ. ನೀವೊಂದು ಸಿಹಿ ತಿನಿಸಿನ ಅಂಗಡಿಗೆ ಹೋಗುತ್ತೀರಿ ಎಂದುಕೊಳ್ಳಿ. ಸಿಹಿ ಖರೀದಿಸುವ ಮುನ್ನ ,’ ಟೇಸ್ಟ್ ಗೆ ಕೊಡಿ’ ಎನ್ನುತ್ತೀರಿ. ಚೂರು ಸಿಹಿ ತಿಂದ ಮೇಲೆ ಚೆನ್ನಾಗಿದೆ ಎನ್ನಿಸಿ ಒಂದೆರಡು ಕೇಜಿಗಳಷ್ಟು ಖರೀದಿಸುತ್ತೀರಿ. ಅಂಗಡಿಯಲ್ಲಿ ವ್ಯಾಪಾರ ಮಾಡುತ್ತೀರಿ. ವ್ಯಾಪಾರ ಮುಂದುವರೆಯುತ್ತದೆ.
Jameel Sawanna ರವರ ಈ ಪ್ರಯೋಗವೂ ಸಾಹಿತ್ಯ ಲೋಕದ ಆ ರುಚಿಯನ್ನು ಕೊಡುವ ಪ್ರಯತ್ನವೇ. ಇಷ್ಟವಾದವರು ಅಕ್ಷರಲೋಕದ ಸಿಹಿಯಂಗಡಿಯತ್ತ ನಡೆಯುವುದರಲ್ಲಿ ಸಂಶಯವಿಲ್ಲ. ಯೋಜನೆ ಯಶಸ್ವಿಯಾಗಲಿ ಎನ್ನುವುದು ನನ್ನ ಹಾರೈಕೆ.