Jogi Girish Rao Hatwar
Jogi Girish Rao Hatwar

Jagadisha Sharma Sampaರು ಸಾವಣ್ಣ ಪ್ರಕಾಶನಕ್ಕಾಗಿ ಬರೆದಿರುವ ಮಹಾಭಾರತ- ಹೇಳಿಯೂ ಹೇಳದ್ದು- ಕೃತಿಗೆ ಬರೆದಿರುವ ಮುನ್ನುಡಿ ಇದು:

ವೈಯಕ್ತಿಕವಾಗಿ ನನಗೆ ಜಗದೀಶ ಶರ್ಮರೆಂದರೆ ಅಚ್ಚುಮೆಚ್ಚು. ಅವರ ಒಳನೋಟಗಳಿಗೆ ನಾನು ಮರುಳಾದವನು. ಒಂದು ಕತೆಯನ್ನು ಹೇಗೆ ಬಗೆಯಬೇಕು ಅನ್ನುವುದನ್ನು ಬಲ್ಲ ಶರ್ಮರು, ನಾವು ಸಾಮಾನ್ಯವಾಗಿ ಕತ್ತಲಲ್ಲಿಟ್ಟ ಕಥಾಭಾಗಗಳಿಗೂ ದೀಪ ಹಿಡಿಯುವ ಕೆಲಸ ಮಾಡುತ್ತಾರೆ. ನಾನೂ ಕೂಡ ಸದಸ್ಯನಾಗಿರುವ ಕಥೆಕೂಟ ಎಂಬ ವಾಟ್ಸಪ್ ಗ್ರೂಪಿನಲ್ಲಿ ಅವರು ಪ್ರತಿಸ್ಪಂದಿಸುವ ರೀತಿ, ಅವರ ವಾಗ್ವಾದದ ವೈಖರಿ, ಹೇಳಬೇಕಾದ್ದನ್ನು ನಿರ್ಭಿಡೆಯಿಂದ ಹೇಳುವ ಕ್ರಮ, ಹಾಗೆ ಹೇಳುವಾಗಲೂ ಮತ್ತೊಬ್ಬರನ್ನು ನೋಯಿಸಬಾರದು ಎಂಬ ಎಚ್ಚರ, ಯಾವ ಕಾಲಕ್ಕೂ ಉದ್ಧಾರ ಆಗದೇ ಇರುವುದನ್ನು ವಿಮರ್ಶಿಸಲು ಹೋಗಬಾರದು ಎಂಬ ವಿವೇಕ- ಎಲ್ಲವೂ ನನ್ನನ್ನು ಅಚ್ಚರಿಗೊಳಿಸಿದೆ. ಅವರು ತಮ್ಮನ್ನು ಅವರೀಗ ಮಾಡುತ್ತಿರುವ ದೈವಿಕ ಕ್ರಿಯೆಗಳಿಗೆ ಒಪ್ಪಿಸಿಕೊಂಡದ್ದರಿಂದ ಸಾಹಿತ್ಯಲೋಕಕ್ಕೆ ದೊಡ್ಡ ನಷ್ಟವಾಗಿದೆ ಅಂತಲೂ ಅನೇಕ ಸಲ ಅನ್ನಿಸುವುದುಂಟು. ತಾವು ಮೈಮೇಲೆ ಎಳೆದುಕೊಂಡಿರುವ ಅಸಂಖ್ಯಾತ ಲೋಕೋಪಯೋಗಿ ಕಾರ್ಯಗಳು ಅವರನ್ನು ಬಾಧಿಸದೇ ಹೋಗಿದ್ದರೆ ಅವರು ಕನ್ನಡದ ಬಹುಮುಖ್ಯ ಸಂಶೋಧಕರಾಗಿ ಹೊರಹೊಮ್ಮುತ್ತಿದ್ದರು ಎಂದು ನಾನು ಈಗಲೂ ನಂಬಿದ್ದೇನೆ.

ಮಹಾಭಾರತ ಹೇಳಿಯೂ ಹೇಳದ್ದು ಜಗದೀಶ ಶರ್ಮರ ಎಷ್ಟನೇ ಕೃತಿ ಎಂಬುದು ನನಗೆ ಗೊತ್ತಿಲ್ಲ. ಅವರು ಆಡದೇ ಮಾಡುವವರು. ಕಥಾಸರಿತ್ಸಾಗರವನ್ನು ದೈನಿಕ ಧಾರಾವಾಹಿಯಾಗಿ ಪ್ರಕಟಿಸುತ್ತಿರುವ ಅವರು, ಶುಕಸಪ್ತತಿಯ ಕತೆಗಳನ್ನೂ ಅದರ ಎಲ್ಲ ಸಂಕೋಚ ಮತ್ತು ಸಂಭ್ರಮದ ಜೊತೆಗೆ ಕನ್ನಡಕ್ಕೆ ತಂದವರು. ಕನ್ನಡಪ್ರಭ ಪತ್ರಿಕೆಯಲ್ಲಿ ವಾರಕ್ಕೊಂದರಂತೆ ಸಾಹಿತ್ಯದ ಮೂಲ ತತ್ವಗಳ ಕುರಿತು ಬರೆಯುತ್ತಲೇ ಬಂದವರು. ಇದರ ನಡುವೆ ಅವರ ಬರೆವಣಿಗೆ ಹತ್ತು ಹಲವು ಕವಲುಗಳಲ್ಲಿ ಸಾಗಿದೆ ಅನ್ನುವುದು ಕೂಡ ನಿಜವೇ.
ಮಹಾಭಾರತ ಒಂದು ಮಹಾಸಾಗರ. ಇಂಡಿಯಾದ ಬಹುತೇಕ ಕತೆ, ಕಾವ್ಯ, ನಾಟಕಗಳು ಹುಟ್ಟಿದ್ದೇ ಮಹಾಭಾರತದ ಸ್ಪೂರ್ತಿಯಿಂದ. ಕಾಲಕಾಲಕ್ಕೆ ಹೊಸದಾಗುವ, ಪ್ರಸ್ತುತವಾಗುವ, ಸಮಕಾಲೀನವಾಗುವ ಗುಣ ಹೊಂದಿರುವ ಮಹಾಭಾರತ ಮತ್ತು ರಾಮಾಯಣಗಳ ಒಳಹೊಕ್ಕು ಅಲ್ಲಿಂದ ಎಲ್ಲರಿಗೂ ಗೊತ್ತಿರುವ ಆದರೆ ಯಾರಿಗೂ ಗೊತ್ತಿರದ ಕತೆಯೊಂದನ್ನು ಹೆಕ್ಕಿ ತರುವುದು ಸಾಹಸದ ಕೆಲಸ. ಅದಕ್ಕೆ ಅಪೂರ್ವ ಪ್ರತಿಭೆಯೂ ಅಸಾಧ್ಯ ತಾಳ್ಮೆಯೂ ಬೇಕು. ಹೊಸ ದೃಷ್ಟಿಕೋನ ಬೇಕು. ಮಹಾಭಾರತವನ್ನು ಎಲ್ಲ ದಿಕ್ಕುದೆಸೆಗಳಿಂದ ನೋಡಿ, ಅದರಿಂದ ಏನೇನನ್ನು ಸ್ವೀಕರಿಸಲು ಸಾಧ್ಯವೋ ಅದನ್ನೆಲ್ಲ ಮಥಿಸಿ ಪಡೆದುಕೊಂಡ ನಂತರವೂ ಎಲ್ಲವನ್ನೂ ತನ್ನಲ್ಲೇ ಉಳಿಸಿಕೊಂಡಿರುವ ಮಹಾಕೃತಿಯನ್ನು ಜಗದೀಶ ಶರ್ಮರು ತಮ್ಮದೇ ಆದ ಹಾದಿಯಿಂದ ಪ್ರವೇಶಿಸುವ ಕೃತಿ ಇದು.

ಹೇಳಿಯೂ ಹೇಳದ್ದು ಎಂಬ ಶೀರ್ಷಿಕೆಯೇ ಈ ಪುಸ್ತಕದ ಕುರಿತು ಹೇಳುತ್ತದೆ. ಒಂದು ಘಟನೆಯಾಗಲೀ ಕತೆಯಾಗಲೀ ನಮ್ಮನ್ನು ಮುಟ್ಟುವುದು ನಮ್ಮ ದೃಷ್ಟಿಕೋನದ ಪ್ರಕಾರ. ತೋರು ಬೆರಳನ್ನೆತ್ತಿ ಚಂದ್ರನನ್ನು ತೋರಿಸಿದಾಗ ಯಾರಿಗೆ ತೋರುಬೆರಳು ಕಾಣುತ್ತದೆಯೋ ಅವರಿಗೆ ಚಂದ್ರ ಕಾಣಿಸನು, ಯಾರಿಗೆ ಚಂದ್ರ ಕಾಣುತ್ತಾನೋ ಅವರಿಗೆ ತೋರುಬೆರಳು ಕಾಣಿಸದು. ಯಾವುದನ್ನು ನೋಡಬೇಕು ಅನ್ನುವುದು ಕಣ್ಣಿನ ಸ್ವಾತಂತ್ರ್ಯವೇ ಹೊರತು ಬಯಲಿನ ಹಕ್ಕಲ್ಲವಷ್ಟೇ!

ಶರ್ಮರು ಮಹಾಭಾರತದ ಪ್ರಸಂಗವನ್ನು ಅಪರಾಧ ಮತ್ತು ಶಿಕ್ಷೆಯ ತಳಹದಿಯಲ್ಲಿ ನೋಡುತ್ತಾರೆ. ಅರೆಕ್ಷಣದ ತಪ್ಪು, ಒಂದು ಅನವಶ್ಯಕ ಛಲ, ಆ ಕ್ಷಣದ ನಿರರ್ಥಕ ನಿರ್ಧಾರ, ಸೇಡಿನ ಕಿಚ್ಚು ಹೀಗೆ ಕಾಲದ ಸುರುಳಿಯಲ್ಲಿ ಚಕ್ರತೀರ್ಥದಂತೆ ಸುತ್ತುತ್ತಾ ಸುತ್ತುತ್ತಾ ಅದಕ್ಕೆ ಕಾರಣನಾದ ವ್ಯಕ್ತಿಯನ್ನೇ ಬಲಿ ತೆಗೆದುಕೊಳ್ಳುತ್ತದೆ ಎಂಬುದನ್ನು ಆಖ್ಯಾನಗಳ ಮೂಲಕ ನಮ್ಮ ಮುಂದಿಡುತ್ತಾರೆ.

ಇದು ಮಹಾಭಾರತ ಅಲ್ಲ, ತಪ್ಪು ಒಪ್ಪುಗಳ ಕತೆ. ಸೇಡಿನ ಕಿಡಿಗೆ ಸುಟ್ಟುಹೋದ ಬದುಕೆಂಬ ಅರಗಿನ ಮನೆಯ ಅಪ್ರಸ್ತುತ ಪ್ರಸಂಗ. ಒಂದು ಕ್ಷಣ ತಣ್ಣಗೆ ಧೇನಿಸಿದ್ದರೆ ಇವೆಲ್ಲ ನಡೆಯುತ್ತಿರಲೇ ಇಲ್ಲ ಎಂದು ಯಾರಿಗೇ ಆದರೂ ಅನ್ನಿಸುವಂಥ ಪ್ರಸಂಗಗಳು ಇಲ್ಲಿವೆ. ಇವುಗಳನ್ನು ಓದುತ್ತಾ ಓದುತ್ತಾ ಈ ಮಹಾಪುರುಷರು ಅಷ್ಟೊಂದು ದಡ್ಡರಾಗಿದ್ದರೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಆದರೆ ದಡ್ಡತನದ ಮೂಲ ಆ ಕ್ಷಣದ ಸಿಟ್ಟು ಎನ್ನುವುದೂ ನಿಧಾನಕ್ಕೆ ಹೊಳೆಯುತ್ತದೆ. ಅದು ನಮ್ಮನ್ನೂ ತಿದ್ದುತ್ತಾ ಹೋಗುತ್ತದೆ. ಹೀಗಾಗಿಯೇ ಈ ಪ್ರಸಂಗಗಳು ನಮ್ಮ ಕಾಲಕ್ಕೂ ದಾಟಿಕೊಳ್ಳುವ ಸಾಮರ್ಥ್ಯ ಮತ್ತು ತುರ್ತು ಹೊಂದಿವೆ.

ಜಗದೀಶ ಶರ್ಮರು ಬಳಸಿರುವ ತಂತ್ರವೂ ಕುತೂಹಲಕಾರಿಯಾಗಿದೆ. ಅಶ್ವತ್ಥಾಮನ ಕತೆಯನ್ನು ಹೇಳಿ ಅಲ್ಲಿಂದ ದ್ರೋಣರತ್ತ ಸಾಗಿ, ಆಮೇಲೆ ದ್ರುಪದನ ಕತೆಯತ್ತ ಬಂದು, ಆ ನಂತರ ದೃಷ್ಟಧ್ಯುಮ್ನನ ಪ್ರಸಂಗವನ್ನು ಮುಂದಿಟ್ಟು, ದ್ರೋಣನ ಸಾವಿನ ಸುಳ್ಳು ಸುದ್ದಿ ಉಸುರಿದ ಧರ್ಮರಾಯನನ್ನೂ ಪರಿವೃತ್ತದೊಳಗೆ ತಂದುಕೊಂಡು ಪರಿಗಣನೆಗೇ ಬಾರದ ಕೃತವರ್ಮನನ್ನೂ ಉಪಪಾಂಡವರ ಸಾವಿಗೆ ಕಾರಣನನ್ನಾಗಿಸಿ, ಆ ಮೂಲಕ ಯಾದವರ ನಾಶದ ಕತೆಯನ್ನು ಹೇಳುವ ಶರ್ಮರು ಎಲ್ಲವನ್ನೂ ಒಳಗೊಳ್ಳುವ ಪರಿ ವಿಶಿಷ್ಟವಾಗಿದೆ. ಹೀಗೆ ಕತೆ ಹೇಳುವಾಗ ಅವರು ಕಾಲಾನುಕ್ರಮವನ್ನೂ ದೃಷ್ಟಿಯಲ್ಲಿಟ್ಟುಕೊಂಡಿದ್ದಾರೆ. ಕೊನೆಯಲ್ಲಿ ಪರೀಕ್ಷಿತ ಬರುವುದು ಕೂಡ ಕಾಕತಾಳೀಯ ಅಲ್ಲ.

ಆದಷ್ಟೂ ಸರಳವಾಗಿ, ವಿಸ್ತಾರವಾಗಿ ಮತ್ತು ಮಿಕ್ಕದಂತೆ ಬರೆದಿದ್ದಾರೆ ಶರ್ಮ. ಪುಟ್ಟದಾಗಿ ಮುಗಿಯುವ ಕತೆಗಳು ಬೇಕು ಅನ್ನುವವರಿಗೆ ಇದು ಇಷ್ಟವಾಗುತ್ತದೆ. ದೀರ್ಘವಾಗಿಯೂ ಸಮಗ್ರವಾಗಿಯೂ ಇರಬೇಕು ಅನ್ನುವವರಿಗೂ ಈ ಪುಸ್ತಕ ಮೋಸ ಮಾಡುವುದಿಲ್ಲ. ಕತೆಗೆ ಕತೆ ಕೂಡಿ ಮಹಾಕತೆಯಾಗುತ್ತದೆ.

ಈ ಕಾಲದ ಭಾಷೆಯಲ್ಲಿ ಹೇಳುವುದಾದರೆ ಜಗದೀಶ ಶರ್ಮರು ಮಹಾಭಾರತದ ಮೇಲೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ತಮಗೆ ಬೇಕುಬೇಕಾದ್ದನ್ನು ಹೆಕ್ಕಿಕೊಂಡು ಅದನ್ನು ತಮ್ಮ ಪ್ರತಿಭೆಯ ದಾರದಲ್ಲಿ ಪೋಣಿಸಿ ಸುಂದರವಾದ ಕಥಾಹಾರವನ್ನಾಗಿಸಿದ್ದಾರೆ. ಇದರ ಓದು ನನಗೆ ಅನೇಕ ನೆನಪುಗಳನ್ನು ಮರುಕಳಿಸಿತು. ಅನೇಕ ಹೊಸ ಸಂಗತಿಗಳನ್ನು ತಿಳಿಸಿಕೊಟ್ಟಿತು. ಮಹಾಭಾರತದ ಒಳಹೊಕ್ಕಲು ಇರುವ ಅಸಂಖ್ಯ ಹಾದಿಗಳಲ್ಲಿ ಮತ್ತೊಂದು ದಾರಿ ಗೊತ್ತಾಯಿತು.