Jogi Girish Rao Hatwar
Jogi Girish Rao Hatwar
ಕುಂತಿ ರಾಜಮಾತೆಯಾಗಿದ್ದರೂ ಆಕೆಯ ಪಾತ್ರ ದಟ್ಟವಾಗಿ ಬರುವುದು ಮೂರು ಸಂದರ್ಭದಲ್ಲಿ. ಗಂಗಾತೀರದಲ್ಲಿ ಇನತನಯನನ್ನು ಭೇಟಿಯಾಗುವ ಸಂದರ್ಭ, ಕರ್ಣನಿಗೆ ಜನ್ಮವಿತ್ತ ಸಂದರ್ಭ, ಪಾಂಡವರ ಮದುವೆಯ ಪ್ರಸಂಗ. ಮಿಕ್ಕಂತೆ ಆಕೆ ಬಹುತೇಕ ನಿರ್ಲಿಪ್ತೆ.
ಮಹಾಭಾರತದಲ್ಲಿ ಪಾಂಡುವಿನ ಪಾತ್ರ ಕುಂತಿಗಿಂತಲೂ ಕಡಿಮೆ. ಬಿಳಿಚಿಕೊಂಡು ಹುಟ್ಟಿದ ಪಾಂಡು, ತಾನೇ ಮಾಡಿದ ತಪ್ಪಿಗೋಸ್ಕರ ಕಾಡಿಗೆ ಹೋಗಿ, ಅಲ್ಲಿದ್ದುಕೊಂಡು, ಪತ್ನಿಯರಿಗೆ ನಿಯೋಗದ ಮೂಲಕ ಮಕ್ಕಳನ್ನು ಕರುಣಿಸಿ, ಕೊನೆಗೆ ತನ್ನದೇ ವಾಂಛೆಗೆ ಬಲಿಯಾಗುತ್ತಾನೆ.
ಇವರಿಬ್ಬರ ಕತೆಯನ್ನು ಜಗದೀಶ ಶರ್ಮಾ ಸಂಪ ಅವರು ವಿಸ್ತಾರವಾಗಿ ಬರೆದಿದ್ದಾರೆ. ಈ ಎರಡು ಪಾತ್ರಗಳ ಬಗ್ಗೆ ಪ್ರೀತಿ ಮತ್ತು ಸಿಟ್ಟು ಉಕ್ಕುವಂತೆ, ಸಹಾನುಭೂತಿ ಮೂಡುವಂತೆ ಮಾಡುವ ಅನೇಕ ಪ್ರಸಂಗಗಳು ಇರುವುದು ಈ ಪುಸ್ತಕ ಓದುವಾಗ ಗೊತ್ತಾಗುತ್ತದೆ.
ಎಂದಿನಂತೆ, ಅವರು ಇವನ್ನೆಲ್ಲ ವಿಶ್ಲೇಷಿಸಲು ಹೋಗಿಲ್ಲ. ಕುಂತಿಯನ್ನಾಗಲೀ ಪಾಂಡುವನ್ನಾಗಲೀ ಮನೋವೈಜ್ಞಾನಿಕ ಸತ್ವಪರೀಕ್ಷೆಗೆ ಒಳಪಡಿಸಿಲ್ಲ.
ಇಲ್ಲಿರುವ ಒಂದು ಸನ್ನಿವೇಶ ನನ್ನನ್ನು ಅಚ್ಚರಿಗೆ ದೂಡಿತು. ಅಷ್ಟೂ ಕೌರವರನ್ನು ಪಾಂಡವರು ಕೊಂದ ನಂತರ, ಕುಂತಿ ಮತ್ತು ಗಾಂಧಾರಿ ಕಾಡಿಗೆ ಹೋಗುತ್ತಾರೆ. ಜತೆಗೇ ಬದುಕುತ್ತಾರೆ. ತನ್ನ ನೂರು ಮಕ್ಕಳನ್ನು ಕೊಂದವರ ತಾಯಿಯ ಜತೆಗೆ ಸಹಬಾಳ್ವೆ ನಡೆಸುತ್ತಾಳೆ.
ದಾಯಾದಿ ಕಲಹ, ರಾಜ್ಯದಾಹ, ದ್ವೇಷ, ಆಕ್ರೋಶ- ಎಲ್ಲವೂ ಗಂಡಸಿನ ಜಗತ್ತಿನದು. ತಾಯಂದಿರು ಅವನ್ನೆಲ್ಲ ಮೀರಿದವರು. ಅದಕ್ಕೇ ಅವರನ್ನು ಅಮ್ಮ ಅಂತ ಕರೆಯುವುದು. ಮಕ್ಕಳ, ಗಂಡನ ಜತೆಗೆ ಇರುವಷ್ಟೂ ದಿನ ತಾಯಿ ತನ್ನ ಸ್ವಂತಿಕೆಯನ್ನು ನೀಗಿಕೊಂಡು ಅವರ ಇಚ್ಚೆಗೆ ತಕ್ಕಂತೆ ವರ್ತಿಸುತ್ತಿರುತ್ತಾರೆ. ಅವರೊಳಗಿನ ಪ್ರಜ್ವಲಿಸುವ ವ್ಯಕ್ತಿತ್ವ ಗೋಚರವಾಗುವುದು ಅವರು ಸಂಸಾರದಿಂದ ಹೊರಗೆ ಬಂದಾಗಲೇ ಎಂಬುದು ಥಟ್ಟನೆ ಹೊಳೆಯಿತು.