Mahesha Araballi
Mahesha Araballi
ಖಳನಾಯಕನೂ ನಾಯಕನೇ. ಅವನ ಜೀವನ ನಿಜವಾದ ನಾಯಕನಿಗಿಂತ ವಿಭಿನ್ನ ಹಾಗೂ ವಿಲಕ್ಷಣ. ವಿಲಕ್ಷಣವಾದರೂ ಆತನ ಬದುಕು ಆಸಕ್ತಿದಾಯಕವಾಗಿರುತ್ತದೆ. ರಾವಣನನ್ನು ಕುರಿತು ತಿಳಿದುಕೊಳ್ಳುವ ಆಸಕ್ತಿಯಿದ್ದರೂ ರಾಮಾಯಣವನ್ನು ಓದುವಾಗ ಮರ್ಯಾದಾಪುರುಷ ಶ್ರೀರಾಮನ ವ್ಯಕ್ತಿತ್ವ ಓದುಗನನ್ನು ಆವರಿಸಿಕೊಂಡುಬಿಡುತ್ತದೆ.
ಲೇಖಕರಿಗೆ ಇದು ಸವಾಲಿನ ವಿಷಯ. ರಾಮಾಯಣವನ್ನು ರಾವಣನ ಕಥನವಾಗಿಸಿ ಮೂಲಕ್ಕೆ ಚ್ಯುತಿ ಬರದಂತೆ ಹೇಳುವುದು ಜಗದೀಶಶರ್ಮಾ ಸಂಪರಂತಹ ಪಂಡಿತರಿಗೆ ಮಾತ್ರ ಸಾಧ್ಯ. ಈ ಕೃತಿಯಲ್ಲಿ ಅವರ ಓದಿನ ಸಮಗ್ರತೆ, ಕಥಾವಸ್ತುವಿನ ಬಗ್ಗೆ ಅವರಿಗಿರುವ ಅಧಿಕೃತ ಮಾಹಿತಿ, ಜ್ಞಾನ ನಿಚ್ಚಳವಾಗಿ ಗೋಚರಿಸುತ್ತದೆ.
ರಾವಣನ ಹುಟ್ಟು, ಆತನ ಏಳು ಜನ್ಮಗಳು, ಆತ ಮಾಡಿದ ತಪಸ್ಸುಗಳು, ಗಳಿಸಿದ ವರಗಳು, ಪಡೆದ ಶಾಪಗಳು, ಆತನ ವ್ಯಕ್ತಿತ್ವ, ಅಹಂಕಾರ, ಕ್ರೌರ್ಯ, ಆತನ ಸಂಸಾರ, ಸ್ವರ್ಣನಗರ, ರಾಕ್ಷಸರ ಅಧಿಪತಿಯಾಗಿ ಆತ ಸರ್ವರನ್ನೂ ಸೋಲಿಸಿದ್ದು, ಸೀತಾದೇವಿಯ ಸೌಂದರ್ಯಕ್ಕೆ ಮರುಳಾಗಿ ಮರಣವನ್ನು ಆಕರ್ಷಿಸಿದ್ದು – ಎಲ್ಲವನ್ನೂ ಸವಿಸ್ತಾರವಾಗಿ, ಸರಳವಾಗಿ ಈ ಕೃತಿಯಲ್ಲಿ ವರ್ಣಿಸಲಾಗಿದೆ.
ಒಂದು ವಿಷಯವನ್ನು ಬೇರೆ ದೃಷ್ಟಿಕೋನದಿಂದ ನೋಡಿದಾಗ ಗ್ರಹಿಕೆ ಹೆಚ್ಚುತ್ತದೆ. ಅಂತೆಯೇ ಈ ಕೃತಿಯ ಓದು ರಾಮಾಯಣದ ಬಗ್ಗೆ ನನಗಿದ್ದ ಗ್ರಹಿಕೆಯನ್ನು ಹೆಚ್ಚಿಸಿದೆ.
ಎಂದಿನಂತೆ ಜಶ ಸಂಪರವರು ಸರಳ ವಾಕ್ಯರಚನೆಯ ಕ್ರಮವನ್ನು ಅನುಸರಿಸಿದ್ದಾರೆ. ಒತ್ತಡದ ದಿನಚರಿಯಲ್ಲಿ pause-resume ಮಾಡಿಕೊಂಡು ಓದುವ ಓದುಗರಿಗೆ ಈ ಕೃತಿಯ ಓದು ಹಿತವೆನಿಸುತ್ತದೆ.