Mohan Kumar D N
Mohan Kumar D N
ಸಾವಣ್ಣ
ನಾಯಕನ ಪಾತ್ರವನ್ನು ನಿಭಾಯಿಸುವುದು ಸಲೀಸು. ಅವನಿಗೆ ಜನ ಮನ್ನಣೆ ಇರುತ್ತದೆ. ಆದರಣೆ ಇರುತ್ತದೆ. ಸಾಮಾಜಿಕ ಸ್ಥಾನ ಭದ್ರವಾಗಿರುತ್ತದೆ. ಆರ್ಥಿಕವಾಗಿ ಇನ್ನೂ ಸುಭದ್ರ. ಹೀಗಾಗಿ ಅವನು ಸುರಕ್ಷಿತ ವಲಯದಲ್ಲಿರುತ್ತಾನೆ. ನಾಯಕನಂತಹ ನಾಯಕನಾಗಬೇಕಾದರೇ, ನಾಲ್ಕು ಜನರಲ್ಲಿ ಹೆಸರು ಗಳಿಸಬೇಕಾದರೇ ಅವನು ವಿಜೃಂಭಿಸಬೇಕು. ಶಕ್ತಿ ಪ್ರದರ್ಶನ ನೀಡಬೇಕು. ಅಸೀಮ ಸಾಹಸವನ್ನು, ಜಾದೂ ರೀತಿಯದ್ದೇನನ್ನೋ ಮಾಡುತ್ತಲೇ ಇರಬೇಕು. ಅದಕ್ಕೆ ಉರುವಲು ಖಳನಾಯಕ ಮತ್ತು ಅವನ ದುಷ್ಟತನ.
ನಾಯಕನಂತೆ ಖಳನಾಯಕನಲ್ಲ. ನಾಯಕನಿಗಿರುವ ಯಾವ ಪ್ರಿವಿಲೇಜಸ್ ಅವನಿಗೆ ಇರುವುದಿಲ್ಲ. ಆಸ್ತಿ ಅಂತಸ್ತು ಮಾನ ಅಭಿಮಾನ.. ಅರಸಿ ಬರುವುದಿಲ್ಲ. ಬರುವುದೊಂದೇ; ಕೆಟ್ಟ ಹೆಸರು. ಖಳನೆನ್ನುವ ಪಟ್ಟ. ಖಳನಿಗೆ ಖಳನೆನ್ನುವ ಪಟ್ಟ ಹೊರುವುದು ಸಮಾಜ ತಂದಿತ್ತ ಅನಿವಾರ್ಯತೆ. ನಾಯಕನ ಪಟ್ಟ ಬದುಕು ಅವನಿಗೆ ಕರುಣಿಸಿದ ಸದವಕಾಶ. ಹೀಗಾಗಿ ನಾಯಕನ ಪಟ್ಟ ಹೊರುವಷ್ಟು ಸುಲಭವಾಗಿ ಖಳನ ಪಟ್ಟ ಹೊರಲಾಗುವುದಿಲ್ಲ.
ಇದು ನೆನ್ನೆ ಮೊನ್ನೆಯ ಕಥೆಯಲ್ಲ. ಯುಗ ಯುಗಗಳಿಂದಲೂ ನಡೆದು ಬಂದಿದೆ. ಇದಕ್ಕೆ ರಾಮ ರಾವಣರೂ ಹೊರತಲ್ಲ. ರಾಮನ ಜನ್ಮವಾದದ್ದು ರಾವಣನ ಸಂಹಾರಕ್ಕಾಗಿ. ರಾವಣನ ಅವತಾರವಾದ್ದರಿಂದಲೇ ರಾಮನ ಉದಯವಾಯ್ತು. ರಾವಣ ಇಲ್ಲದಿದ್ದರೆ ರಾಮನಿಲ್ಲ. ರಾಮನಿಲ್ಲದೆ ರಾವಣನೂ ಇಲ್ಲ. ಶಿಷ್ಟ ರಕ್ಷಣೆ ದುಷ್ಟ ರಕ್ಷಣೆ ಒಂದೇ ಮುಖದ ಎರಡು ನಾಣ್ಯಗಳು.
ಏನೋ ಹೇಳಲುಪಕ್ರಮಿಸಿ ಇನ್ನೇನೋ ಹೇಳುತ್ತಿದ್ದೇನೆಂದರೆ ಮನ್ನಿಸಿ.
ಹುಡುಕಿದರು, ಹುಡುಕದಿದ್ದರೂ ರಾಮನ ಬಗ್ಗೆ ಅಗತ್ಯಕ್ಕಿಂತ ಹೆಚ್ಚಿನ ಮಾಹಿತಿ ಸಿಗುತ್ತದೆ. ಸೀತಾಪಹರಣದ ಹಿಂದಿನ ರಾವಣನ ಮಾಹಿತಿ ಬೇಕೆಂದರೂ ಸಿಗುವುದಿಲ್ಲ. ಇದು ರಾವಣನ ಶಕ್ತಿಯೂ ಹೌದು, ಸೀಮಿತತೆಯೂ ಹೌದು. ಆದರೆ ಈ ಕೃತಿ ಆ ಕೊರತೆಯನ್ನು ನೀಗಿಸಿದೆ. ಇಲ್ಲಿ ರಾಮ ನಿಮಿತ್ತ. ಏಕೆಂದರೆ, ಇದು ದಶಕಂಠನ ಕಥೆ. ಲಂಕಾಧಿಪತಿ ರಾವಣನಾದ ಕಥೆ. ರಾವಣನ ಬಗ್ಗೆ ಇಲ್ಲಿ ಯಥೇಚ್ಛವಾಗಿ ಮಾಹಿತಿ ಸಿಗುತ್ತದೆ.
ರಾವಣನ ಪೂರ್ವೇತಿಹಾಸ ಸೇರಿದಂತೆ ಅನೇಕ ಸಂಗತಿಗಳು ಭರಪೂರ ಹರಿದಿದೆ. ಬ್ರಹ್ಮನಿಂದ ಮೊದಲುಗೊಂಡು ರಾವಣನ ತನಕ ಪೌಲಸ್ತ್ಯ ವಂಶ ಬೆಳೆದು ಬಂದ ವಂಶಾವಳಿಯ ಕಥೆ ಸಮಗ್ರವಾಗಿ ನೋಡಬಹುದು. ರಾವಣ ಸೀತಾಪಹರಣವನ್ನು ಮಾಡಿ ಸಾವನ್ನಪ್ಪುತ್ತಾನಷ್ಟೇ? ಅದರ ಹಿಂದಿನ ನೈಜ ಘಟನೆ, ಕಾರಣವಾದ ಶಾಪಗಳು, ಅದನ್ನು ನೀಡಿದವರು.. ಇಂತಹ ಹಲವು ಕುತೂಹಲ ಘಟನೆಗಳು ಇಡೀ ಪುಸ್ತಕದಲ್ಲಿ ಸಿಗುತ್ತವೆ.
ಓದುತ್ತಾ ಹೋದಂತೆ, ತನ್ನ ಮಾಮೂಲು ಸ್ವಾದಕ್ಕಿಂತಲೂ ರುಚಿಯಾದ ಹಣ್ಣು ಸೇವಿಸಲು ಹೇಗೆ ವರ್ಜ್ಯವಾಗುವುದಿಲ್ಲವೋ ಹಾಗೇ, ಯುದ್ಧದ ಅತಿಯಾದ ವರ್ಣನೆಗಳು ಓದುಗರನ್ನು ಏಕಾತನತೆಯತ್ತ ದೂಡುತ್ತವೆ. ಇನ್ನೂರ ಎಂಭತ್ತು ಪುಟಗಳಲ್ಲಿ ಭಾಗಶಃ ರಾವಣನ ಯುದ್ಧೋನ್ಮಾದವೇ ಹರಿದಿದೆ. ಹಾಗಂತ ಇದು ರಕ್ತಸಿಕ್ತ ಕಥನವಲ್ಲ; ಅದರಿಂದ ಹೊರತಾದ ಕಥನ. ಬಹುಶಃ ರಾವಣನನ್ನು ಅರಿಯಲು ಇಂತಹ ವಿವರಣೆ ಪುಸ್ತಕದ ಮಟ್ಟಿಗೆ ಅಗತ್ಯವಿರಲೂಬಹುದು. ಆದರೆ ರಾವಣನನ್ನು ರಣಭೂಮಿಯಲ್ಲಿ ಶ್ರೀಮಂತಗೊಳಿಸಿದಂತೆ, ಅವನ ಅಂತರಂಗವನ್ನು ಇನ್ನಷ್ಟು ಬಗೆಯಲು ಅವಕಾಶವಿತ್ತು ಅಂತ ನನ್ನ ವೈಯಕ್ತಿಕ ಅನಿಸಿಕೆ.
ಲೇಖಕ ಜಗದೀಶಶರ್ಮ ಸಂಪ ಅವರು ಪುರಾಣ ಕಥೆಗಳನ್ನು ಬರಹಕ್ಕೆ ತರುವಲ್ಲಿ ಸಿದ್ಧಹಸ್ತರು. ಅವರು ಮಹಾಭಾರತದ ಕುರಿತು ಬರೆದ ‘ಭೀಷ್ಮ ಹೇಳಿದ ಮ್ಯಾನೇಜ್ಮೆಂಟ್ ಕಥೆಗಳು’, ‘ಮಹಾಭಾರತ ಹೇಳಿಯೂ ಹೇಳದ್ದು’, ‘ಮಹಾಭಾರತದ ನೈಜ ನಾಯಕ ವಿಧುರ’ ಮುಂತಾದ ಅಮೂಲ್ಯವಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ರಾಮಾಯಣ ಕುರಿತಾಗಿ ಮಕ್ಕಳಿಗೆಂದೇ ಬರೆದ ‘ಸ್ಫೂರ್ತಿ ರಾಮಾಯಣ’. ‘ದಶಕಂಠ ರಾವಣ’ ಹೋದ ಭಾನುವಾರವಷ್ಟೇ ಬಿಡುಗಡೆಯಾಗಿದೆ.
ಇಲ್ಲಿ ಬಳಸಿರುವ ಭಾಷೆ ಸರಳವಾಗಿರುವುದರ ಜೊತೆಗೆ ಅವರ ಪಾಂಡಿತ್ಯ ಪ್ರೌಢಿಮೆಯನ್ನು ತೋರಿಸುತ್ತದೆ. ಯಾರು ಬೇಕಾದರೂ, ಎಲ್ಲಿಂದ ಬೇಕಾದರೂ ಇದನ್ನು ಓದಬಹುದು. ರಾವಣನ ಬಗ್ಗೆ ಕನ್ನಡದಲ್ಲಿ ಪುಸ್ತಕಗಳು ಲಭ್ಯವಿಲ್ಲ ಎನ್ನುವ ಕೊರತೆಯನ್ನು ಈ ಕೃತಿ ನೀಗಿಸುತ್ತದೆ.
ನಮಸ್ಕಾರ.