Naveena Krishna Bhat
Naveena Krishna Bhat
ವಿದುರ – ಜಗದೀಶಶರ್ಮಾ ಸಂಪ
ವ್ಯಾಸಋಷಿಪ್ರಣೀತ ಮಹಾಭಾರತದಲ್ಲಿ ಕಂಡುಬರುವ ವಿದುರನ ಪಾತ್ರ ಬಹು ವಿಶಿಷ್ಠವಾದದ್ದು. ಮಹಾಭಾರತ ಕಾಲದ ರಾಜನೀತಿಜ್ಞರಲ್ಲಿ ವಿದುರನನ್ನು ಮೀರಿಸಿದ ಮತ್ತೊಬ್ಬನಿರಲಿಲ್ಲ. ಹಾಗಾಗಿಯೇ ಆತ ಕುರುಕುಲದ ಆಸ್ಥಾನದಲ್ಲಿದ್ದ ಮಹಾ ಮೇಧಾವಿ ಹಾಗೂ ಅಪ್ರತಿಮ ಬುದ್ಧಿಶಾಲಿ. ಮಾಂಡವ್ಯ ಮುನಿಯಿಂದ ಶಾಪಗ್ರಸ್ತನಾದ ಮೃತ್ಯು ದೇವತೆ ಯಮನೇ ವಸುಂಧರೆಯಲ್ಲಿ ವಿದುರನಾಗಿ ಜನಿಸಿ ಕುರುಕುಲದ ಆಧಾರಸ್ತಂಭವಾಗುತ್ತಾನೆ. ಹಲವು ಸಂದರ್ಭಗಳಲ್ಲಿ ವಿದುರನ ವಿವೇಕ ತಣ್ಣೀರನ್ನೂ ತಣಿಸುತ್ತಿತ್ತು! ಇಂತಿಪ್ಪ ವಿದುರನ ಪಾತ್ರ ಚಿತ್ರಣವನ್ನು ಕಟ್ಟಿಕೊಡುವ ಹೊತ್ತಗೆಯೇ ಜಗದೀಶಶರ್ಮಾ ಸಂಪ ಅವರ ‘ವಿದುರ’.
ಇಲ್ಲಿರುವುದು ನಾವೆಲ್ಲರೂ ತಿಳಿದುಕೊಂಡ ಮಹಾಭಾರತದ ಕಥೆಯಾದರೂ ಪೋಷಕ ಪಾತ್ರವೆಂದು ಅಷ್ಟಾಗಿ ಗಮನಹರಿಸದಿದ್ದ ವಿದುರನೆಂಬ ಮಹಾಭಾರತದ ನೈಜನಾಯಕನನ್ನು ಕೇಂದ್ರೀಕೃತಗೊಳಿಸಿ ಸಾಗುವ ಕಥೆಯೇ ಇದು. ಹಸ್ತಿನಾವತಿಯ ಆಸ್ಥಾನದಲ್ಲಿ ಚಾಣಾಕ್ಷ ಮಂತ್ರಿಯಾಗಿ, ಮಹಾರಾಜ ಧೃತರಾಷ್ಟ್ರನಿಗೆ ಅಗತ್ಯ ಸಲಹೆಗಾರನಾಗಿ, ಅದಕ್ಕಿಂತಲೂ ಮಿಗಿಲಾಗಿ ಪಾಂಡುಸುತರನ್ನು ಹಂತಹಂತವಾಗಿ ಬೆಳೆಸಿ ರೂಪಿಸಿದ ವಿದುರ ನಿಜಾರ್ಥದ ಪೋಷಕ. ಮಹಾಭಾರತದ ಬೇರೆ ಬೇರೆ ಪಾತ್ರಗಳನ್ನು ಪ್ರಧಾನವಾಗಿರಿಸಿಕೊಂಡು ವಿದ್ವಜ್ಜನರಿಂದ ಬಂದ ಕೃತಿಗಳು ಬಹಳಷ್ಟಿವೆ. ಆದರೆ ವಿದುರನೆಂಬ ಮಹಾಪ್ರಾಜ್ಞನನ್ನು ಕೇಂದ್ರೀಕೃತಗೊಳಿಸಿ ಬಂದ ಕೃತಿಗಳು ಇಲ್ಲವೇ ಇಲ್ಲವೆನ್ನಬಹುದು. ಜಗದೀಶಶರ್ಮಾ ಅವರು ಅತ್ಯಂತ ಸಮರ್ಥವಾಗಿ ಆ ಕೊರತೆಯನ್ನು ಇಲ್ಲವಾಗಿಸಿದ್ದಾರೆ.
ಕೃತಿಯ ಪ್ರವೇಶಿಕೆಯೇ ಒಂದು ಸುಂದರ ಅನುಭೂತಿಯನ್ನು ಕೊಡುವಂತಹದ್ದು. ಮಹಾಭಾರತ ಯಮನ ಕಥೆಯೆನ್ನುತ್ತಾ ಲೇಖಕರು ಆ ಮಾತನ್ನು ಬಹಳ ಸೊಗಸಾಗಿ ಶ್ರುತಪಡಿಸುತ್ತಾರೆ. ಇಡೀ ಕೃತಿಯನ್ನು ವಿದುರನ ಕಥೆ, ವಿದುರ ಹೇಳಿದ ಕಥೆ, ವಿದುರ ನೀತಿ ಎಂದು ವಿಂಗಡಿಸಲಾಗಿದೆ. ಮೊದಲ ಭಾಗದಲ್ಲಿ ಸಮಗ್ರ ಮಹಾಭಾರತದ ಕಥನವನ್ನು ವಿದುರನ ಪಾತ್ರಕ್ಕೆ ಪ್ರಾಧ್ಯಾನ್ಯತೆಯನ್ನು ಕೊಟ್ಟು ಮನತಟ್ಟುವಂತೆ ಲೇಖಕರು ಪ್ರಸ್ತುತಪಡಿಸುತ್ತಾರೆ. ಇಲ್ಲಿ ನನಗೆ ಬಹಳ ಇಷ್ಟವಾದದ್ದು ವಿದುರ ಇರುವ ಪ್ರಮುಖ ಸನ್ನಿವೇಶಗಳನ್ನು ವಿಸ್ತಾರವಾಗಿಯೂ, ಅವನಿಲ್ಲದ ಘಟ್ಟಗಳನ್ನು ಸಂಕ್ಷೇಪವಾಗಿಯೂ ಹೇಳಿದ್ದು. ಇಲ್ಲಿ ಅನಗತ್ಯ ವಿವರಣೆಗಳಿಗೆ ಆಸ್ಪದವಿಲ್ಲ. ಹಾಗಾಗಿ ಓದು ಅತ್ಯಂತ ಸುಲಲಿತ.
ವಿದುರನು ಧೃತರಾಷ್ಟ್ರನಿಗೋ, ಪಾಂಡವರಿಗೂ ಹೇಳುವ ವಿವೇಕಭರಿತ ಮಾತುಗಳು (ಧರ್ಮಸೂಕ್ಷ್ಮಗಳು) ಮತ್ತೆ ಮತ್ತೆ ಓದುವಷ್ಟು ಸೊಗಸಾಗಿದೆ. ಎರಡನೇ ಭಾಗದಲ್ಲಿ ವಿದುರ ಹೇಳಿದ ನೀತಿ ಕಥೆಗಳಿವೆ. ಮೂರನೇ ಭಾಗ ವಿದುರ ನೀತಿಯಲ್ಲಿರುವ ವಿದುರನ ನೀತಿ ವಾಕ್ಯಗಳು ನಮ್ಮ ಜೀವನಕ್ಕೆ ಅಳವಡಿಸಿಕೊಳ್ಳಲೇಬೇಕಾದವುಗಳು. ವಿದುರ ನೀತಿಯನ್ನು ಆಗಾಗ ಓದುತ್ತಿರಬೇಕು. ಒಂದೊಂದು ನೀತಿಗಳೂ ವಜ್ರದಷ್ಟು ಬೆಲೆಬಾಳುವಂತವುಗಳು. ವಿದುರನ ಕಥೆಯಲ್ಲಿಯೋ, ವಿದುರ ಹೇಳುವ ಕಥೆಯಲ್ಲಿಯೋ, ವಿದುರ ನೀತಿಯಲ್ಲಿಯೋ ಇರುವ ತಿರುಳನ್ನು ಲೇಖಕರು ವಿಶ್ಲೇಷಿಸುವ ಬಗೆ ಮನಮುಟ್ಟುತ್ತದೆ.
ನಾನಿಲ್ಲಿ ಲೇಖಕರ ಭಾಷಾ ಬಳಕೆಯ ಬಗ್ಗೆ ಹೇಳಲೇಬೇಕು. ಅತ್ಯಂತ ಸರಳ ಮತ್ತು ಸುಂದರವಾದ ಪದಪುಂಜಗಳ ಜೋಡಣೆ ಎಷ್ಟು ಚೆನ್ನಾಗಿದೆಯೆಂದರೆ ಈ ಕೃತಿಯನ್ನು ಮಕ್ಕಳೂ ಓದಬಹುದಾಗಿದೆ. ಇಂತಹ ಪುಸ್ತಕಗಳು ಪುರಾಣದತ್ತ ಆಸಕ್ತಿಯನ್ನು ಹೆಚ್ಚಿಸುತ್ತವೆ. ಪುರಾಣದ ಕಥೆಗಳಲ್ಲಿರುವ ಮೌಲ್ಯಗಳನ್ನು ಅರಿಯುವುದಕ್ಕಾಗಿ ಇಂತಹ ಕೃತಿಗಳನ್ನು ತಪ್ಪದೇ ಓದಬೇಕು. ರಾಜನಾಗಲು ಯೋಗ್ಯತೆಯಿದ್ದೂ ಅರ್ಹತೆ ಪ್ರಾಪ್ತವಾಗದ, ವಿಶ್ವ ಶ್ರೇಷ್ಠ ಮಹಾನ್ ರಾಜನೀತಿಜ್ಞ ವಿದುರನೆಂಬ ಕಂಡೂ ಕಾಣದಂತಿದ್ದವನ ಅಂತರಂಗವನ್ನು ಶೋಧಿಸಿ, ಅವನ ಬದುಕನ್ನು ಅನಾವರಣಗೊಳಿಸಿದ ಜಗದೀಶ ಶರ್ಮರು ಅಭಿನಂದನೆಗಳಿಗೆ ಅರ್ಹರು.