ನವೀನಕೃಷ್ಣ ಎಸ್. ಉಪ್ಪಿನಂಗಡಿ
ನವೀನಕೃಷ್ಣ ಎಸ್. ಉಪ್ಪಿನಂಗಡಿ

ದಶಕಂಠ ರಾವಣ – ಜಗದೀಶ ಶರ್ಮಾ ಸಂಪ

ವಿಶ್ರವಸ್-ಕೈಕಸಾ ದೇವಿಯ ಸಂಜಾತ. ಬ್ರಹ್ಮನ ಮರಿಮಗ. ಪೌಲಸ್ತ್ಯ ವಂಶದ ಕುಡಿ. ಭಯಾ-ಹೇತಿ, ಪ್ರಹೇತಿ, ಸಾಲಕಟಂಕಟಾ-ವಿದ್ಯುತ್ಕೇಶರ ವಂಶದಲ್ಲಿ ಜನಿಸಿದ ಕೈಕಸಾ ದೇವಿಯ ಸುಪುತ್ರ. ಅತುಲ ಪರಾಕ್ರಮಿ. ಬಲಿಷ್ಠ, ಸಮರ್ಥ. ಮೂರು ಲೋಕವನ್ನೇ ನಡುಗಿಸಬಲ್ಲ ಪ್ರಚಂಡ ಸಾಮರ್ಥ್ಯ ಹೊಂದಿದ್ದ ರಣವಿಕ್ರಮಿ. ಆದರೆ ದುಷ್ಟತನ, ಸ್ತ್ರೀ ಲೋಲುಪತೆ, ಕಪಟತನ, ದುರ್ಬುದ್ಧಿ, ಅಹಂಕಾರದಿಂದ ತನ್ನ ಸಾವನ್ನು ತಾನೇ ಬರಸೆಳೆದವ. ಇಂತಿಪ್ಪ ದಶಕಂಠನ ಸಮಗ್ರ ಕಥೆಯನ್ನು ತಿಳಿಸುವ ಪುಸ್ತಕ ‘ದಶಕಂಠ ರಾವಣ’.

ರಾವಣನ ವ್ಯಕ್ತಿತ್ವ ನಮಗೆ ಹೆಚ್ಚು ಪರಿಚಯವಿರುವುದು ಸೀತಾಪಹಾರದ ಸನ್ನಿವೇಶದಿಂದ. ಅದಕ್ಕೂ ಮೊದಲು ಸೀತಾ ಸ್ವಯಂವರದಲ್ಲಿ ಒಂದಿಷ್ಟು ಪರಿಚಯ. ಆದರೆ ಈ ಪುಸ್ತಕದಲ್ಲಿ ರಾವಣ ಮಾತ್ರವಲ್ಲದೆ ಪುಲಸ್ತ್ಯರಿಂದ ಹಿಡಿದು ಮುಂದಿನ ತಲೆಮಾರುಗಳ ಕಥೆ ಹರಿದುಬಂದಿದೆ. ಜೊತೆಗೆ ಸೃಷ್ಟಿಯ ಆರಂಭದಲ್ಲಿ ರಾಕ್ಷಸರ ಇತಿಹಾಸ ಎಲ್ಲಿಂದ ಆರಂಭಗೊಂಡಿತು ಎಂಬುದರ ಬಗ್ಗೆಯೂ ಉಲ್ಲೇಖವಿದೆ. ರಾವಣ-ಕುಂಭಕರ್ಣರ ಜನ್ಮದ ಹಿಂದಿನ ಶಾಪದ (ಜಯ-ವಿಜಯರ ವೃತ್ತಾಂತ) ಹಿನ್ನೆಲೆಯನ್ನೂ ವಿವರಿಸಲಾಗಿದೆ.

ವರಬಲದಿಂದ ಕೊಬ್ಬಿದ ದಶಕಂಠ ಕಂಡ ಕಂಡವರನ್ನು ಹಿಂಸಿಸತೊಡಗಿದ. ಮೂರು ಲೋಕವನ್ನೇ ತಲ್ಲಣಗೊಳಿಸಿದ. ಸ್ವರ್ಗಾಧಿಪತಿ ಇಂದ್ರನನ್ನೂ ಬಿಡಲಿಲ್ಲ. ಮೃತ್ಯುದೇವತೆ ಯಮನನ್ನೂ ಬಿಡಲಿಲ್ಲ. ಕಂಡ ಕಂಡ ಸ್ತ್ರೀಯರನ್ನು ಅನ್ಯಾಯವಾಗಿ ಬಲಾತ್ಕರಿಸಿದ. ಸಿಕ್ಕ ಸಿಕ್ಕವರ ವಿರುದ್ಧ ಯುದ್ಧ ಸಾರಿದ. ದಿಗ್ಗಜ ವೀರರೊಡನೆ ನಡೆದ ಸೆಣೆಸಾಟದಲ್ಲಿ ಗೆದ್ದು ಬೀಗಿದ. ವೀರ ವಾಲಿಯ ಬಳಿ ಪೆಟ್ಟೂ ತಿಂದ. ಕೃತವೀರ್ಯ ಸಂಜಾತ ಕಾರ್ತವೀರ್ಯನೆದುರು ಗರ್ವಭಂಗವನ್ನೂ ಅನುಭವಿಸಿದ. ಇವರಿಬ್ಬರೆದುರು ಸೋತದ್ದು ಬಿಟ್ಟರೆ ಮತ್ಯಾರಿಗೂ ಸೊಪ್ಪುಹಾಕಲಿಲ್ಲ. ಎಲ್ಲವೂ ತನ್ನ ಅಧೀನದಲ್ಲಿರಬೇಕೆಂದು ಅಟ್ಟಹಾಸ ಮೆರೆಯುತ್ತಿದ್ದ.

ಏತನ್ಮಧ್ಯೆ ರಾವಣ ಕಟ್ಟಿಕೊಂಡದ್ದು ಅದೆಷ್ಟೋ ಶಾಪಗಳನ್ನು. ನಂದಿಯ ಅವಹೇಳನ ಮಾಡಿ ಶಾಪ ಕಟ್ಟಿಕೊಂಡ. ವೇದವತಿಯ ಬಲಾತ್ಕಾರದ ಪ್ರಯತ್ನ ಮಾಡಿ ಶಾಪ ಕಟ್ಟಿಕೊಂಡ. ಅಕಾರಣ ವಧೆಯ ಕಾರಣ ಅಯೋಧ್ಯೆಯ ರಾಜ ಅನರಣ್ಯನಿಂದ ಶಾಪ ಕಟ್ಟಿಕೊಂಡ. ಸಾಧ್ವಿ ಸ್ತ್ರೀಯರ ಅಪಹರಣಗೈದು ಶಾಪ ಕಟ್ಟಿಕೊಂಡ. ರಂಭೆಯನ್ನು ಬಲಾತ್ಕಾರ ಮಾಡಿ ನಲಕೂಬರನಿಂದ ಶಾಪ ಕಟ್ಟಿಕೊಂಡ. ಪುಂಜಿಕಸ್ಥಲೆಯನ್ನು ಬಲಾತ್ಕರಿಸಿ ಸೃಷ್ಟಿಕರ್ತ ಬ್ರಹ್ಮದೇವನಿಂದ ಶಾಪ ಕಟ್ಟಿಕೊಂಡ.

ಈ ಶಾಪಗಳೆಲ್ಲವೂ ಮುಂದೆ ಸತ್ಯವಾಗಲಿದ್ದವು. ಇವು ರಾವಣನ ಅವಸಾನಕ್ಕೆ ಮುನ್ನುಡಿ ಬರೆದಿದ್ದವು. ಚೈತ್ರ ಮಾಸದ ನವಮೀ ತಿಥಿಯ ಪುನರ್ವಸು ನಕ್ಷತ್ರದಂದು ಲೋಕಪಾಲಕ ಮಹಾವಿಷ್ಣು ಶ್ರೀರಾಮನಾಗಿ ಅವತರಿಸಿದ್ದ. ಅಲ್ಲಿಂದ ದುರಹಂಕಾರಿ ರಾವಣನ ಅಧಃಪತನ ಆರಂಭ. ತಿದ್ದಿಕೊಳ್ಳುವುದಕ್ಕೆ ರಾವಣನಿಗೆ ಪ್ರತೀ ಕ್ಷಣವೂ ಬಹಳಷ್ಟು ಅವಕಾಶಗಳು ಹಲವು ರೂಪದಲ್ಲಿ ಬಂದವು. ಆದರೆ ತಿದ್ದಿಕೊಳ್ಳಲಿಲ್ಲ. ಕಾಲನ ಪ್ರಭಾವ. ಪೂರ್ವ ಜನ್ಮದ ಶಾಪವೂ ಹಾಗೆಯೇ ಇತ್ತಲ್ಲವೇ? ಕೊನೆಗೆ ಯುದ್ಧ ವಿಶಾರದ, ತ್ರಿಭುವನ ತಲ್ಲಣನು ಇನವಂಶವಾರಿಧಿಯಿಂದ ಹತನಾದ.

ಜಗದೀಶ ಶರ್ಮರು ಇಂತಹ ಪೌರಾಣಿಕ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಮುಖ್ಯವಾಗಿ ಇದು ವಾಲ್ಮೀಕಿ ರಾಮಾಯಣ, ವ್ಯಾಸಋಷಿಪ್ರಣೀತ ಭಾಗವತ ಮತ್ತು ಪದ್ಮಾಪುರಾಣಗಳಿಗೆ ನಿಷ್ಠವಾಗಿದೆ ಎಂಬುದು ಉಲ್ಲೇಖನೀಯ. ರಾವಣನ ಇತಿಹಾಸದೊಂದಿಗೆ ಯುದ್ಧಕಾಂಡದ ಸ್ಥೂಲ ನೋಟವೂ ಇಲ್ಲಿ ಸಿಗುತ್ತದೆ. ಅಪ್ರತಿಹತ ಪರಾಕ್ರಮ ಹೊಂದಿದರೂ ಸೂತ್ರದ ಬೊಂಬೆಯಂತಾಗಿದ್ದ ರಾವಣನ ಜೀವನ ಹೇಗೆ ಅವನತಿಯತ್ತ ಮುಖಮಾಡಿತು? ರಿಪು ಭಯಂಕರಿ ತನ್ನ ಸಾವನ್ನು ತಾನೇ ಹುಡುಕಹೊರಟ ಕಥನ ಇಲ್ಲಿ ಸಿಗುತ್ತದೆ.

ಜಗದೀಶ ಶರ್ಮರ ಭಾಷಾ ಪ್ರೌಢಿಮೆ ಅದ್ಭುತವಾದದ್ದು. ಸಣ್ಣ ಸಣ್ಣ ವಾಕ್ಯಗಳಲ್ಲಿ ಸರಳವಾಗಿ, ಸುಂದರವಾಗಿ ಕಥೆ ಹೇಳುವ ಶೈಲಿ ಅವರಿಗೆ ಸಿದ್ಧಿಸಿದೆ. ಅವರ ಹಿಂದಿನ ಕೃತಿಗಳಿಗಿಂತ ಈ ಕೃತಿ ತುಸು ಹೆಚ್ಚೇ ಇಷ್ಟವಾಯಿತು.

– ನವೀನಕೃಷ್ಣ ಎಸ್. ಉಪ್ಪಿನಂಗಡಿ

https://www.facebook.com/100019197431646/posts/pfbid02g4tKsqcX5pNQknQu3ivucFRcyooVHKBgSot3a13teaAgx1NbW4BTfgcoiHo4J3Kkl/?app=fbl