ಪದಪಥ | Pada Patha
ಒಂದೊಂದು ಪದಕ್ಕೆ ಒಂದೊಂದು ಕಥೆ ಇರುತ್ತದೆ. ಅದೇ ಭಾಷೆಯ ವೈಶಿಷ್ಟ್ಯ. ಸಾಧಾರಣವೆನಿಸುವ ಮಾತಿನಲ್ಲಿ ಬಳಸುವ ಪದಗಳು ನಮ್ಮನ್ನು ಯಾವುದೋ ಕಾಲಕ್ಕೆ, ಲೋಕಕ್ಕೆ ಕರೆದುಕೊಂಡು ಹೋಗಿಬರುವ ಸಾಮರ್ಥ್ಯವನ್ನು ಹೊಂದಿವೆ.
ನಾವಾಡುವ ಮಾತುಗಳಲ್ಲಿ ಎಷ್ಟೋ ಪದಗಳು ನಮಗೆ ಅಪರಿಚಿತವೇ. ಅವುಗಳ ಹುಟ್ಟು, ಬೆಳವಣಿಗೆ, ಸಮಯ, ಸಂದರ್ಭ ಇದಾವುದೂ ಗೊತ್ತೇ ಇರುವುದಿಲ್ಲ. ಯಾರೋ ಬಳಸಿದ್ದನ್ನು ಕೇಳಿಸಿಕೊಂಡು, ಮತ್ತಾವುದೋ ಸಂದರ್ಭದಲ್ಲಿ ಅದನ್ನು ಪ್ರಯೋಗಿಸುತ್ತೇವೆ. ಅದು ಸರಿಯೋ ತಪ್ಪೋ ಎನ್ನುವ ಅರಿವೂ ಕಡಿಮೆಯೇ.
ಆಗಾಗ ಮಾತಿನಲ್ಲಿ ಬಳಸುವ ‘ಭಗೀರಥ ಪ್ರಯತ್ನ’ ಎನ್ನುವ ಪದವು ತ್ರೇತಾಯುಗದ ಭಗೀರಥ ಎನ್ನುವ ರಾಜನ ಕಥೆ ಎಂದು ಎಷ್ಟು ಜನರಿಗೆ ಅರಿವಿದೆ? ಮಹಾಭಾರತದಲ್ಲಿ ಬರುವ ‘ಧೃತರಾಷ್ಟ್ರಪ್ರೀತಿ’, ರಾಮಾಯಣದಲ್ಲಿ ಬರುವ ‘ಆತುರಗೆಟ್ಟ ಆಂಜನೇಯ’ ಪ್ರತಿನಿತ್ಯ ಎಲ್ಲ ಬಾಯೊಳಗೆ ಹೊಗುವರಾದರೂ ಪರಿಚಯ ಮಾತ್ರ ಇಲ್ಲ. ಒಂದಲ್ಲ ಒಂದು ‘ಚಕ್ರವ್ಯೂಹ’ದಲ್ಲಿ ಸಿಕ್ಕಿರುವ ನಮಗೆ, ಚಕ್ರವ್ಯೂಹ ಅಂತಿರಲಿ, ಚಕ್ರವ್ಯೂಹ ಪದವನ್ನೇ ಭೇದಿಸಿ ಗೊತ್ತಿಲ್ಲ.
ಹೀಗೇ ನಾವು ನಿತ್ಯ ಬಳಸುವ ಅನೇಕ ಪದಗಳು ಎಲ್ಲಿಂದ ಬಂದವು ಎನ್ನುವ ಅವರ ಕೇರ್ ಆಫ್ ಅನ್ನು ತಿಳಿಸುವ ಕೃತಿ ಪದಪಥ. ಹೊಸದಿಂಗತ ದಿನಪತ್ರಿಕೆಯಲ್ಲಿ ಪ್ರಕಟವಾದ ಅಂಕಣ ಬರಹದ ಗುಚ್ಛ ಇದು. ೮೧ ಪದಗಳ ಪರಿಚಯ ಇಲ್ಲಿದೆ.
ಈ ಪದಪಥದಲ್ಲಿ ಸಾಗಿದರೆ ನಮ್ಮದೇ ಆದ ಕಾಣದ ಜಗತ್ತೊಂದು ಅನಾವವರಣಗೊಳ್ಳುತ್ತದೆ. ಆಡುವ ಮಾತು ಅರ್ಥವತ್ತಾಗುತ್ತದೆ.
- ಲೋಹಿತ ಹೆಬ್ಬಾರ್