Rangaswamy Mookanahalli
Rangaswamy Mookanahalli

ಶ್ರೀಲಂಕನ್ನರ ಪ್ರಕಾರ ರಾವಣ ಹೀರೋ , ಸುಭಗ . ರಾಮ ವಿಲನ್ . ಬದುಕು ಅದೆಷ್ಟು ವಿಚಿತ್ರ ಅಲ್ಲವೇ ನಾವು ಏನೇ ಆಗಿರಲಿ ಯಾರೋ ಒಬ್ಬರ ಪಾಲಿಗೆ ವಿಲನ್ ಆಗುವುದಂತೂ ತಪ್ಪುವುದಿಲ್ಲ !

ನಾನು ರಾಮಾಯಣವನ್ನ ಓದಿದವನಲ್ಲ. ನನಗೆ ಸಂಸ್ಕೃತ ಜ್ಞಾನವೂ ಇಲ್ಲ. ಶ್ಲೋಕದ ಕನ್ನಡ ಅರ್ಥವನ್ನ ಓದಿ ಖುಷಿಪಡುವವನು. ನನ್ನಜ್ಜಿ (ಅಮ್ಮನ ಅಮ್ಮ ) ಗಂಗಜ್ಜಿ ರಾಮಾಯಣವನ್ನ ಪೂರ್ಣವಾಗಿ ಬಾಯಿಯಲ್ಲಿ ಹಾಡಿನ ರೂಪದಲ್ಲಿ ಹೇಳುತ್ತಿದ್ದಳು. ಆಕೆಯ ಬಾಯಿಯಲ್ಲಿ ಅದೆಷ್ಟೋ ಪುಣ್ಯ ಪುರುಷರ ಹೆಸರನ್ನ ಕೇಳಿದ್ದೇನೆ. ಅಂತೆಯೇ ಅದೆಷ್ಟೋ ರಾಕ್ಷಸರ ಪರಿಚಯವಾದದ್ದು ಕೂಡ ಅಜ್ಜಿಯ ಮೂಲಕವೇ ! ವಾಲಿಯ ವಧೆಯನ್ನ ಶ್ರೀರಾಮನು ಮಾಡಿದಾಗ , ವಾಲಿಗೆ ರಾಮ ಸುಗ್ರೀವನ ಜೊತೆಯಾಗಿ ಸೀತಾಮಾತೆಯನ್ನ ಹುಡುಕಲು ಹೊರಟ್ಟಿದ್ದಾನೆ , ಸೀತಾಮಾತೆಯನ್ನ ರಾವಣನು ಅಪಹರಿಸಿದ್ದಾನೆ ಎನ್ನುವುದು ತಿಳಿಯುತ್ತದೆ. ಆಗ ವಾಲೀ ‘ ಯಕಶ್ಚಿತ್ ಹತ್ತು ತಲೆಯ ಒಂದು ಕೀಟಕ್ಕಾಗಿ ನೀನು ಇಷ್ಟೊಂದು ಕಷ್ಟಪಡುತ್ತಿದ್ದೀಯ ? ನನ್ನ ಬಳಿ ಹೇಳಿದ್ದರೆ , ಆ ಹುಳುವನ್ನ ಹಿಡಿದು ತಂದು ನಿನಗೆ ಉಡುಗೊರೆಯಾಗಿ ಕೊಡುತ್ತಿದ್ದೆ ‘ ಎನ್ನುತ್ತಾನೆ. ವಾಲೀ ಅದೆಂತಹ ಅಪರಿಮಿತ ಬಲಶಾಲಿ ಎನ್ನುವುದನ್ನ ಅಜ್ಜಿ ವರ್ಣಿಸಲು ಕೊಡುತ್ತಿದ್ದ ಉಪಮೆ , ಉಪಕಥೆಗಳನ್ನ ನನ್ನ ಜೀವವಿರುವವರೆಗೂ ಮರೆಯಲಾಗದು. ಅಜ್ಜಿ ಮುಂದುವರೆದು ರಾವಣನನ್ನ ವಾಲಿಯು ತನ್ನ ಮಗನ ತೊಟ್ಟಿಲಿಗೆ ವಿಚಿತ್ರ ಹತ್ತು ತಲೆಯ ಜಂತು ಮಗು ನೋಡಿ ಆನಂದಿಸಲಿ ಎಂದು ತಂದು ಕಟ್ಟಿದ್ದನಂತೆ !

ಮರ್ಯಾದಾ ಪುರುಷೋತ್ತಮ ರಾಮನ ಗುಣಗಾನವನ್ನ ಅಜ್ಜಿ ಬದುಕಿರುವವರೆಗೂ ನಿತ್ಯವೂ ಪಠಿಸುತ್ತಿದ್ದಳು. ರಾಮಾಯಣದ ಪೂರ್ಣ ಕಥೆಯನ್ನ ಪದ್ಯದ ರೂಪದಲ್ಲಿ ಹಾಡುತ್ತಿದ್ದಳು , ಅವೆಲ್ಲವೂ ರಾಮನ ಹೆಸರಿನಿಂದ ಕೊನೆಯಾಗುವ ಸಾಲುಗಳು . ಅಂದರೆ ಗಮನಿಸಿ ಒಂದು ಸಾಲು ಕೂಡ ರಾಮನ ಹೆಸರಿಲ್ಲದೆ ಮುಕ್ತಾಯವಾಗುವಂತಿಲ್ಲ !!

ನಾವೆಲ್ಲರೂ ಹುಟ್ಟಿನಲ್ಲಿ , ಸಾವಿನಲ್ಲಿ ಮತ್ತು ನಿದ್ರೆಯಲ್ಲಿ ಸಮಾನರು. ಬರುವಾಗ ಬೆತ್ತಲೆ , ಹೋಗುವಾಗ ಬೆತ್ತಲೆ. ಈ ಮಧ್ಯದ ವಿರಾಮದ ಸಮಯದಲ್ಲಿ ಒಬ್ಬ ರಾವಣನಾಗುತ್ತಾನೆ , ಒಬ್ಬ ರಾಮ. ಇನ್ನೊಬ್ಬ ವಿಭೀಷಣ , ಸುಗ್ರೀವ , ಹನುಮ ಮತ್ಯಾರೋ ಜಾಂಬವಂತರಾಗುತ್ತಾರೆ. ಒಬ್ಬ ರಾಜನಾಗುತ್ತಾನೆ , ಒಬ್ಬ ಸೈನಿಕ , ಸೇವಕ. ಒಬ್ಬ ಧನಿಕನಾಗುತ್ತಾನೆ , ಒಬ್ಬ ಭಿಕ್ಷುಕ. ಒಬ್ಬ ಯೋಗಿಯಾಗುತ್ತಾನೆ , ಇನ್ನೊಬ್ಬ ಭೋಗಿ ! ಹೀಗೇಕೆ ? ಹುಟ್ಟುವಾಗ ಇಲ್ಲದ ಈ ಭೇಧಗಳು ಸೃಷ್ಟಿಯಾಗುವುದಾದರೂ ಹೇಗೆ ?

೨೦೧೮ ರಲ್ಲಿ ಶ್ರೀಲಂಕಾ ದೇಶವನ್ನ ಹತ್ತು ದಿನಗಳ ಕಾಲ ರೋಡ್ ಟ್ರಿಪ್ನಲ್ಲಿ ಸುತ್ತಿದ್ದಾಗ ರಾವಣನು ಸೀತೆಯನ್ನ ಬಂಧಿಸಿಟ್ಟ ಎನ್ನಲಾದ ಅಶೋಕವನವನ್ನ ನೋಡುವ ಅವಕಾಶ ನನ್ನದ್ದಾಗಿತ್ತು. ರಾಮಾಯಣದ ಕುರುಹುಗಳನ್ನ ಇಂದಿಗೂ ನಾವು ಕಾಣಬಹುದು. ರಾಮಾಯಣ ಟ್ರಿಪ್ ಎನ್ನುವ ವಿಶೇಷ ರೂಟ್ ಅಲ್ಲಿ ಸಿದ್ಧವಿದೆ. ಕೊಲಂಬೋ ನಗರದಲ್ಲಿ ಒಂದು ದೊಡ್ಡ ಪುಸ್ತಕದಂಗಡಿಯಿದೆ , ನಮ್ಮ ಸಪ್ನಾ ಬುಕ್ ಹೌಸ್ ನೆನಪಿಗೆ ತರುತ್ತದೆ. ಅಲ್ಲಿ ಕೊಂಡದ್ದು ರಾವಣ ಕಿಂಗ್ ಆಫ್ ಲಂಕಾ ಎನ್ನುವ ಪುಸ್ತಕ. ಶ್ರೀಲಂಕನ್ನರ ಪ್ರಕಾರ ರಾವಣ ಹೀರೋ , ಸುಭಗ . ರಾಮ ವಿಲನ್ . ಬದುಕು ಅದೆಷ್ಟು ವಿಚಿತ್ರ ಅಲ್ಲವೇ ನಾವು ಏನೇ ಆಗಿರಲಿ ಯಾರೋ ಒಬ್ಬರ ಪಾಲಿಗೆ ವಿಲನ್ ಆಗುವುದಂತೂ ತಪ್ಪುವುದಿಲ್ಲ !

ರಾವಣ ಬ್ರಾಹ್ಮಣ , ೬೪ ವಿದ್ಯೆಯಲ್ಲೂ ಪಾರಂಗತ. ರಾಮ , ರಾವಣನ ಗುಣ ಮತ್ತು ಶಕ್ತಿಯ ಅರ್ಧವನ್ನೂ ಕೂಡ ಹೊಂದಿರದ ಮನುಷ್ಯ. ಆದರೂ ರಾವಣ , ರಾಮನ ಕೈಯಲ್ಲಿ ಹತನಾಗುತ್ತಾನೆ. ಪೌಲಸ್ತ್ಯ ಕುಟುಂಬದಲ್ಲಿ ಜನಿಸಿ , ಬ್ರಹ್ಮನ ಮೊಮ್ಮಗ , ಕುಬೇರನ ಮಲ ಸಹೋದರನಾದ . ಸಕಲ ವಿದ್ಯೆಯ ಅಧಿಪತಿ ರಾವಣ ಅದೇಕೆ ಕೆಟ್ಟವನಾದ ?

ನಾವು ಪರಿಸ್ಥಿತಿ ಅಥವಾ ಸನ್ನಿವೇಶದ ಕೈಗೊಂಬೆಗಳೇ ? ಅಥವಾ ನಮ್ಮ ನಡೆ , ಮತ್ತು ನಡೆತೆ ನಮ್ಮನ್ನ ಹೀರೋ ಅಥವಾ ವಿಲನ್ ಮಾಡುತ್ತದೆಯೇ ? ಪರಿಸ್ಥಿತಿಗೆ ನಾವು ನೀಡುವ ಪ್ರತಿಕ್ರಿಯೆ ನಮ್ಮ ಹಣೆಬರಹವನ್ನ ಬರೆಯುತ್ತದೆಯೇ ? ಅಥವಾ ನಾವು ಬೇರೊಬ್ಬರಿಂದ ಪ್ರೇರಿತರಾಗಿ ಕಾರ್ಯವನ್ನ ಎಸಗುತ್ತೇವೆಯೇ ? ನಾವ್ಯಾರು ? ನಾವೇಕೆ ರಾವಣ ಅಥವಾ ರಾಮರಾಗುತ್ತೇವೆ ? ಉತ್ತರ ಬೇಕಿದ್ದರೆ ಪುಸ್ತಕ ಓದಿ .

ಪುಸ್ತಕದ ಕೊನೆಯಲ್ಲಿ ನೀಡಿರುವ ವ್ಯಕ್ತಿಕೋಶ , ರಾವಣನ ವಂಶವೃಕ್ಷ , ರಾವಣನ ವ್ಯಕ್ತಿಕೋಶ , ರಾವಣನಿಗೆ ಸಿಕ್ಕ ಶಾಪಗಳು . ಇವುಗಳನ್ನ ಅನುಬಂಧದಲ್ಲಿ ನೀಡಲಾಗಿದೆ. ಈ ಕೊನೆಯ ಹತ್ತು ಪೇಜುಗಳು ಸಾಕು ನಾವು ಪುಸ್ತಕಕ್ಕೆ ಕೊಟ್ಟ ಪೂರಾ ಪೈಸಾ ವಸೂಲ್ ಆಗಲು .

ಕನ್ನಡ ಸಾಹಿತ್ಯ ಲೋಕಕ್ಕೆ ಇದೊಂದು ಅತಿ ವಿರಳ ಕಾಣಿಕೆ ಎನ್ನವುದರಲ್ಲಿ ಎರಡು ಮಾತಿಲ್ಲ. ಪೂಜ್ಯರಾದ ವಿದ್ವಾನ ಜಗದೀಶ್ ಶರ್ಮ ಸಂಪ ಅವರು ನನ್ನ ಪೂರ್ವ ಜನ್ಮದ ಸುಕೃತದಿಂದ ಇಂದಿಗೆ ನನ್ನ ಉತ್ತಮ ಸ್ನೇಹಿತರು , ಗುರು ಸಮಾನರು , ಅವರಿಗೆ ಇಂತಹ ಪುಸ್ತಕವನ್ನ ರಚಿಸಿದಕ್ಕೆ ಅಭಿನಂದನೆಗಳು . ಇಂತಹ ಪುಸ್ತಕವನ್ನ ಪ್ರಕಟಿಸಿದ ನೀವೂ ಕೂಡ ಅಭಿನಂದನಾರ್ಹರು ಜಮೀಲ್ ಜೀ .

ಶುಭವಾಗಲಿ .

ಪುಸ್ತಕ – ದಶಕಂಠ ರಾವಣ .
ಪ್ರಕಾಶಕರು – ಸಾವಣ್ಣ ಪ್ರಕಾಶನ .
ಲೇಖಕರು – ಜಗದೀಶ್ ಶರ್ಮ ಸಂಪ .
ಪುಸ್ತಕದ ಬಗ್ಗೆ ನಾಲ್ಕು ಮಾತು – ರಂಗಸ್ವಾಮಿ ಮೂಕನಹಳ್ಳಿ