Ravi Kantha
Ravi Kantha
ಮಹಾಭಾರತದ ನೈಜ‌ ನಾಯಕ ಎನ್ನಲಾದ ವಿದುರ ಅಲ್ಲಿ ಯಾರ ವಿರುದ್ದವೂ ತೊಡೆ ತಟ್ಟಲಿಲ್ಲ, ಅಸ್ತ್ರ ಹೂಡಲಿಲ್ಲ, ಶಸ್ತ್ರ ಹಿಡಿದು ಹೋರಾಡಲಿಲ್ಲ. ಆದರೆ ಮಹಾಭಾರತದುದ್ದಕ್ಕೂ ಆತ ನ್ಯಾಯ-ನೀತಿ ಪರವಾಗಿಯೇ ಇದ್ದ. ಅಷ್ಟೇ ಆಗಿದ್ದಿದ್ದರೆ ಆತ ಪ್ರಸ್ತುತ ಅನಿಸಿರುತ್ತಿರಲಿಲ್ಲವೇನೋ? ಆದರೆ ಆತ ಅಗತ್ಯ ಬಿದ್ದಾಗೆಲ್ಲ ಮಾತಾಡಿದ, ಏನು ಹೇಳಬೇಕಿತ್ತೋ ಅದನ್ನು ಹೇಳಿದ. ಹೇಳಬೇಕಾದ್ದನ್ನು ಹೇಳದೆ ಸುಮ್ಮನಿರಲಿಲ್ಲ.
ಆತ ಹೇಳಿದ್ದನ್ನು ಮೊದಮೊದಲು ಒಪ್ಪದವರು ಕೊನೆಯಲ್ಲಾದರೂ ಒಪ್ಪಿದರು. ಕೊನೆಯವರೆಗೂ ಒಪ್ಪದವರು ಅನ್ಯಾಯವಾಗಿ ಸಾವನ್ನಪ್ಪಿದರು.
ವಿದುರ ಎರಡೂ ಕಡೆಗೂ ಇದ್ದ, ಕೌರವ-ಪಾಂಡವರಿಬ್ಬರ ಜೊತೆಗೂ ಇದ್ದು ಸಮಾಜದ ಹಿತ ಬಯಸಿದ. ಆತ ಕೌರವರನ್ನು ವಿರೋಧಿಸಲಿಲ್ಲ, ಅವರ ವರ್ತನೆಯಷ್ಟೇ ವಿರೋಧಿಸಿದ.
ಆದರೆ ಈ ಭಾರತದಲ್ಲಿ ನಮಗೆ ಯಾರದೋ ವರ್ತನೆ, ಆತನ ಪಕ್ಷ/ಸಿದ್ಧಾಂತ/ಪಂಥ/ತತ್ವ ಸರಿ ಇಲ್ಲ ಅನಿಸಿದರೆ ಆತ ಮಾಡಿದ್ದೆಲ್ಲವೂ ತಪ್ಪು, ಆತನೇ ಸರಿ ಇಲ್ಲ ಅನಿಸಿಬಿಡುತ್ತದೆ. ವಿಚಾರ/ವಿಷಯವನ್ನಷ್ಟೇ ದ್ವೇಷಿಸಬೇಕಾದ ನಾವು ವ್ಯಕ್ತಿಯನ್ನೇ ಇಡಿಯಾಗಿ ದ್ವೇಷಿಸತೊಡಗುತ್ತೇವೆ.
ಸತ್ಯ-ನ್ಯಾಯ-ನೀತಿಗೆ ಕಟ್ಟುಬೀಳುವುದಕ್ಕಿಂತ ನಮಗೆ ಒಂದು ಪಕ್ಷ/ಪಂಥ/ಸಿದ್ಧಾಂತಕ್ಕೆ ಕಟ್ಟುಬೀಳುವುದು ಸುಲಭವಾಗುತ್ತಿದೆ. ಅದೇ ಕಾರಣಕ್ಕೆ ಗಲಭೆ, ದೊಂಬಿ, ಗಲಾಟೆಗಳು ಆಗುತ್ತಿವೆ.
ಹಾಗಂತ ಈಗ ನಾವು ವಿದುರ ಆಗಲು ಅಸಾಧ್ಯ.‌ ಆದರೆ ವಿದುರನಂತಾಗುವ ಅವಕಾಶ ನಮಗಿದ್ದೇ ಇದೆ. ಅದು ಮತ್ತೇನೂ ಅಲ್ಲ.. ಸರಿ-ತಪ್ಪುಗಳನ್ನು ಮುಲಾಜಿಲ್ಲದೆ ಹೇಳಿಬಿಡುವುದು. ಸತ್ಯ-ನ್ಯಾಯದ ಪರವಾಗಿ ಮಾತನಾಡಬೇಕಾಗಿ ಬಂದಾಗ ಮಾತನಾಡಿದರೆ ಸಾಕು.. ಅದೇ ದೊಡ್ಡ ಹೋರಾಟ.‌
ಜಗದೀಶ ಶರ್ಮಾ‌ ಸಂಪ ಅವರ ‘ಮಹಾಭಾರತ: ಹೇಳಿಯೂ ಹೇಳದ್ದು’ ನನಗೆ ತುಂಬಾ ಇಷ್ಟವಾದ ಪುಸ್ತಕ. ನಾನು ಓದಿದ ಅವರ ಪುಸ್ತಕಗಳ ಪೈಕಿ ಅದು ಮೊದಲನೆಯದ್ದು. ಅದನ್ನು ಓದಿದ ಬಳಿಕ ಆ ಪುಸ್ತಕವನ್ನು ಓದುವಂತೆ ಹಲವರಿಗೆ ಶಿಫಾರಸು ಮಾಡಿದ್ದೆ. ಇದೀಗ ನಾನು ಮೊನ್ನೆಯಷ್ಟೇ ಓದಿದ ಅವರ ಇನ್ನೊಂದು ಪುಸ್ತಕ ‘ವಿದುರ’ ಕೂಡ ಎಲ್ಲರೂ ಓದುವಂತೆ ಶಿಫಾರಸು ಮಾಡುತ್ತಿದ್ದೇನೆ. ಯಾಕಂದ್ರೆ ಈಗಿನ ಪರಿಸ್ಥಿತಿಯಲ್ಲಿ ಸತ್ಯ-ನ್ಯಾಯದ ಪರ ನಿಷ್ಪಕ್ಷಪಾತವಾಗಿ ಹೇಳಬೇಕಾದ್ದನ್ನು ಹೇಳಬೇಕಾದವರ ಅಗತ್ಯ ತುಂಬಾ ಇದೆ.
‘ಮಹಾಭಾರತ: ಹೇಳಿಯೂ ಹೇಳದ್ದು’
👇👇👇👇👇