ಸಂತ ತ್ರಿವಿಕ್ರಮ | Santa Trivikrama
ಆತ್ಮಸಾಧನೆಗಾಗಿ ತನ್ನನ್ನೇ ಅರ್ಪಿಸಿಕೊಂಡ ಪುಣ್ಯಧರಿತ್ರಿ ಈ ಭರತಭೂಮಿ. ಜೀವಲೋಕದ ಸುಖದ ನೆಲೆಯನ್ನು ಕಂಡು, ಅನುಭವಿಸಿ, ಸುಖದ ಸೀಮೆಯೊಳಗೆ ಎಲ್ಲ ಜೀವಿಗಳನ್ನೂ ಕೊಂಡೊಯ್ಯುವ ನೈಜಜೀವಹಿತದ ಆಕಾಂಕ್ಷೆಯಿಂದ ತಪಸಿರುವುದು ಈ ನೆಲದ ಸಹಜತೆ.
ಭಾರತದ ಇತಿಹಾಸವನ್ನು (ನಿಜ ಇತಿಹಾಸವಾದ ಪುರಾಣ, ರಾಮಾಯಣ, ಮಹಾಭಾರತಗಳಿಂದ ಆರಂಭಿಸಿ ನಿನ್ನೆಯವರೆಗಿನ ಘಟನೆಗಳನ್ನು) ಅವಲೋಕಿಸಿದರೆ ಇದೇ ಉದ್ದೇಶಕ್ಕಾಗಿಯೇ ಭಾರತ ಶ್ರಮಿಸಿದೆ ಎನ್ನುವುದು ಸೂರ್ಯಸ್ಪಷ್ಟವಾಗಿ ತಿಳಿಯುತ್ತದೆ.
ಭಾರತದ ಈ ಇತಿಹಾಸದ ಅರಿವು ಮತ್ತು ಅವಗಾಹನೆಗಳು; ಕೇವಲ ನಾಡಿನ ಹಿರಿತನದ ಉಕ್ಕೀರ್ತನೆಯಾಗದೇ, ಜಗತ್ತಿನ ಹಿತಕ್ಕೆ ಸಹಕಾರಿಗಳಾಗುತ್ತವೆ; ವ್ಯಕ್ತಿಯ ಉತ್ಕರ್ಷಕ್ಕೆ ಮಾರ್ಗದರ್ಶಿಗಳಾಗುತ್ತದೆ.
ಅಂತಹದೊಂದು ಇತಿಹಾಸದ ವಿಹಂಗಮದೃಶ್ಯವೇ ಈ ಪುಟ್ಟಹೊತ್ತಿಗೆ. ಜೀವಲೋಕದ ಇಲ್ಲಿನ ಬದುಕನ್ನೂ ಅಲ್ಲಿನ ಬದುಕನ್ನೂ ಕಟ್ಟಿಕೊಡುವ ಸಂತರೊಬ್ಬರ ಬದುಕಿನ ಇಣುಕುನೋಟವಿದು.
ಸಂತತ್ರಿವಿಕ್ರಮರು ಅಂಥವರು. ಎಂಥವರೆಂದರೆ ಭಾರತದಂತವರು. ತನಗಾಗಿ ಏನ್ನನ್ನೂ ಕಟ್ಟಿಕೊಳ್ಳದೆ ಅನ್ಯರಿಗಾಗಿ ಕಟ್ಟುವವರು. ಅನ್ಯರ ಬೆಳಕಿಗಾಗಿ ತಪಿಸುವವರು.
***
ಅಮೂರ್ತ ದೇವರ ಮೂರ್ತರೂಪ ಸಂತ. ಹಾಗಾಗಿಯೇ ಜೀವಿಗಳಲ್ಲಿ ಸಂತರ ಸ್ಥಾನ ಬಹಳ ದೊಡ್ಡದು. ತಾನೂ ದೇವರಾಗಿ, ತನ್ನ ಬಳಿಬಂದವರನ್ನೂ ದೇವರನ್ನಾಗಿಸುವ ವೈಶಿಷ್ಟ್ಯ ಅವರದು. ಭಕ್ತರ ಭವದ ಬೇಗೆಯನ್ನು ಬೂದಿ ಮಾಡಿ, ಬ್ರಹ್ಮಭಾವವನ್ನು ಬಿತ್ತುವ ಭೈರಾಗಿತನ ಅದು.
ಸಂತ ತ್ರಿವಿಕ್ರಮಾನಂದ ಸರಸ್ವತೀ ಸ್ವಾಮಿಗಳು ಭಾರತದ ಪ್ರಾಚೀನ ಪರಂಪರೆಗಳಲ್ಲಿ ಒಂದಾದ ನಾಥ ಪರಂಪರೆಯ ಸಂತರಾಗಿ ಭುವಿಯನ್ನು ಬೆಳಗಿದವರು. ಉತ್ತರಕರ್ನಾಟಕದ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗಂವ್ಹರದಲ್ಲಿದ್ದು, ಅಲ್ಲಿಯೇ ಸಮಾಧಿಸ್ಥರಾಗಿ ಶಿಷ್ಯ-ಭಕ್ತರನ್ನು ಸಮುದ್ಧರಿಸುತ್ತಿರುವ ಮಹಾಸಂತ ಅವರು.
ಕೇವಲ ಒಂದು ಶತಕದ ಹಿಂದಷ್ಟೇ ಆಗಿಹೋದ, ಬ್ರಹ್ಮಭಾವ ಮೆರೆದ ಆ ಮಹಾತ್ಮರ ಜೀವನ ಚರಿತೆ ‘ಸಂತ ತ್ರಿವಿಕ್ರಮ’ ಕೃತಿ. ಇದು ಜೀವನ ಚರಿತೆಯ ಜೊತೆ ಜೀವನದ ಮರ್ಮವನ್ನು ತಿಳಿಸುವ ಸಂತರ ತತ್ತ್ವಪದಗಳನ್ನೂ ಒಳಗೊಂಡಿದೆ.
~~~~~~~~~~~~~~~~~~~~~~~~~~~~~~~~~~~~
ಕರುಣಾಳು ಸೃಷ್ಟೀಶ. ಜೀವಿಯ ಇಹಪರಗಳ ಪಯಣ ಸುಖಕರವಾಗಲೆಂದು, ಉದ್ಧಾರಕ್ಕೆಂದು ಅನೇಕ ಮಾರ್ಗಗಳನ್ನು ಸೃಷ್ಟಿಯಲ್ಲಿ ಇಟ್ಟಿದ್ದಾನೆ. ಅನೇಕ ವ್ಯಕ್ತಿಗಳು ಕೂಡ ಈ ಪ್ರಯಾಣಕ್ಕೆ ಮಾರ್ಗದರ್ಶಕರಾಗಿ ಬರುತ್ತಾರೆ. ಮಹಾಸಂತ ಶ್ರೀತ್ರಿವಿಕ್ರಮರು ಹಾಗೂ ಆ ಪರಂಪರೆಯ ಸಂತಶ್ರೇಷ್ಠರು ಇಂತಹ ಮಾರ್ಗ ಮತ್ತು ಈ ಕೃತಿಯನ್ನು ನಮಗೆ ಕೊಟ್ಟ, ಇಂತಹ ಅನೇಕ ಬರವಣಿಗೆಗಳ ಮೂಲಕ ಪಯಣಕ್ಕೆ ನೆರವಾಗುತ್ತಿರುವ ಲೇಖಕರು ದಾರಿದೀಪ ಎಂಬುದು ಈ ಕೃತಿಯನ್ನು ಓದುತ್ತಾ ಹುಟ್ಟಿದ ಭಾವ.
ತತ್ತ್ವಭರಿತ ಮುನ್ನುಡಿ ಕೃತಿಯ ಘನತೆಯನ್ನು ಹೆಚ್ಚಿಸಿದೆ. ಕೊನೆಯಲ್ಲಿ ಒಪ್ಪವಾಗಿ ಜೋಡಿಸಿಕೊಟ್ಟ ಶ್ರೀತ್ರಿವಿಕ್ರಮರ ತತ್ತ್ವಪದಗಳು ಓದುಗರ ಅನುಸಂಧಾನಕ್ಕಿವೆ.
– ಮಂಗಲಾ ಯಶಸ್ವಿ ಭಟ್
ಲೇಖಕಿ