Suvarnini Konale
Suvarnini Konale
ಪ್ರಕಾಶಕರು: #ಸಾವಣ್ಣ_ಪ್ರಕಾಶನ Jameel Sawanna
ನಮ್ಮೊಳಗೆ ಪ್ರಶ್ನೆ ಮೂಡಬೇಕು, ಅಥವಾ ಯಾರಾದರೂ ಪ್ರಶ್ನೆ ಕೇಳಬೇಕು. ಆಗ ನಮ್ಮೊಳಗೊಂದು ಮಂಥನ ಶುರುವಾಗುತ್ತದೆ. ನವನೀತ ತೇಲುತ್ತದೆ. ಅದು ಬದುಕನ್ನು ಹಸನಾಗಿಸುವ ತುಪ್ಪವಾಗುತ್ತದೆ. ಹಾಗೆ ನಮ್ಮೊಳಗೆ ಮೂಡುವ ಅಥವಾ ಬದುಕು ನಮ್ಮೆಡೆಗೆ ಎಸೆಯುವ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ಬದುಕು. ಆದರೆ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಯೇ ಬಿಡುತ್ತದೆ ಎಂದೇನಿಲ್ಲ. ಕೆಲವು ಸುಲಭವಾಗಿ ಸಿಗಬಹುದು, ಕೆಲವನ್ನು ಪ್ರಯತ್ನದಿಂದ ಪಡೆಯಬಹುದು, ಇನ್ನು ಕೆಲವು ಕೊನೆಯವರೆಗೂ ಕಗ್ಗಂಟಾಗಿಯೇ ಉಳಿಯಬಹುದು. ಅದಕ್ಕೇ ನಮ್ಮ ಬದುಕಿನಲ್ಲಿ ಒಮ್ಮೆ ಸಿಹಿ, ಒಮ್ಮೆ ಕಹಿ. ಒಮ್ಮೆ ನೋವು, ಒಮ್ಮೆ ನಗು.
ದ್ವಾಪರದಲ್ಲಿ ಒಮ್ಮೆ ಹೀಗಾಯ್ತು. ಕಾಡಿನಲ್ಲಿರುವ ಪಾಂಡವರ ಬಳಿಗೆ ಬ್ರಾಹ್ಮಣನೊಬ್ಬ ಬಂದು ‘ನನ್ನ ಅರಣಿಯು ಜಿಂಕೆಯ ಕೋಡಿಗೆ ಸಿಲುಕಿಕೊಂಡಿದೆ, ಜಿಂಕೆಯೋ ಕಾಡಿನೊಳಗೆ ಓಡಿಹೋಗಿದೆ, ನನಗೀಗ ಅಗ್ನಿಯ ಆರಾಧನೆ ಮಾಡಬೇಕಿದೆ, ಅರಣಿಯನ್ನು ತಂದುಕೊಡಿ’ ಎನ್ನುತ್ತಾನೆ. ಪಾಂಡವರು ಜಿಂಕೆಯ ಹಿಂದೆ ಓಡುತ್ತಾರೆ. ಪಾಂಡವರಿಗೇ ದಣಿವಾಗುವಷ್ಟು ಓಡಿಸುತ್ತದೆ ಆ ಜಿಂಕೆ. ದಣಿದ ಪಾಂಡವರಲ್ಲಿ ನಾಲ್ವರು ನೀರು ಕುಡಿಯಲು ಸರೋವರದ ಬಳಿ ಹೋಗಿ ಸಾಯುತ್ತಾರೆ. ಉಳಿದವನು ಒಬ್ಬ. ಯುಧಿಷ್ಠಿರ. ಅವನೂ ನೀರು ಕುಡಿಯಲು ಹೊರಟಾಗ ಅವನನ್ನು ತಡೆದ ಯಕ್ಷ, ಪ್ರಶ್ನೆಗಳ ಮಳೆ ಸುರಿಸುತ್ತಾನೆ. ನಾವಾಗಿದ್ದರೆ ‘ಹೋಗಯ್ಯಾ ನಿಂದೇನು ದೊಡ್ಡ ಪ್ರಶ್ನೆಗಳು, ಜಿಂಕೆಯ ಹಿಂದೆ ಓಡಿ ಸುಸ್ತಾಗಿದೆ, ನೀರು ಕುಡಿದು ಆಮೇಲೆ ನಿನ್ನ ಪ್ರಶ್ನೆಗೆ ಉತ್ತರ ಹುಡುಕೋಣ’ ಎನ್ನುತ್ತಿದ್ದೆವು. ಭೀಮಾರ್ಜುನ ನಕುಲಸಹದೇವರೂ ಅದನ್ನೇ ಮಾಡಿದ್ದು. ಇವನು ಯುಧಿಷ್ಠಿರ. ಆದ್ದರಿಂದ ಯಕ್ಷ ಕೇಳುವ ಅಷ್ಟೂ ಪ್ರಶ್ನೆಗೆ ಉತ್ತರಿಸುತ್ತಾನೆ, ಸರಿಯಾಗಿ ಉತ್ತರಿಸುತ್ತಾನೆ.
ಯಕ್ಷನ ಪ್ರಶ್ನೆಗಳೆಲ್ಲ ನಮ್ಮ ಬದುಕಿನ ಪ್ರಶ್ನೆಗಳೂ ಹೌದು. ಆದರೆ ಅವುಗಳು ನಮ್ಮೊಳಗೆ ಹುಟ್ಟುವುದೇ ಇಲ್ಲ, ಹುಟ್ಟಿದರೂ ನಾವದನ್ನು ನಿರ್ಲಕ್ಷಿಸುತ್ತೇವೆ, ಅವುಗಳಿಗೆ ಉತ್ತರವನ್ನು ಹುಡುಕುವ ಗೋಜಿಗೇ ಹೋಗುವುದಿಲ್ಲ. ನಮಗೆ ರೋಟಿ, ಕಪಡಾ, ಮಕಾನ್ ಗಳನ್ನು ಮೀರಿದ ಬದುಕಿನ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯವಿದೆ ಅನಿಸುವುದೇ ಇಲ್ಲ!
ಈ ಸರಣಿ ಇರುವುದೇ ಹೀಗೆ. ನಮಗೆ ಬೇಕಾದ ಹಾಗೆ ಇಡ್ಲಿಹಿಟ್ಟನ್ನು ಮಿನಿಯೋ ತಟ್ಟೆಯೋ ಸಾಮಾನ್ಯ ಇಡ್ಲಿಯೋ ಮಾಡುವಂತೆ, ಮೇಲೆ ತುಪ್ಪವನ್ನೋ ಬೆಣ್ಣೆಯನ್ನೋ ಸಾಂಬಾರೋ ಚಟ್ನಿಯೋ ಸುರಿದು ಸವಿಯಲು ಕೊಡುತ್ತಾರೆ ಲೇಖಕರು. ಇದನ್ನು ಓದಲು ಒಂದು ಗಂಟೆಯೂ ಬೇಡ. ಒಳಗಿಳಿಸಿಕೊಳ್ಳಲು ಒಂದು ಆಯುಸ್ಸು ಸಾಕಾಗದು.