Suvarnini Konale
Suvarnini Konale
ಪ್ರಕಾಶಕರು: ಸಾವಣ್ಣ ಪ್ರಕಾಶನ Jameel Sawanna
ಅವಧೂತರು ನಡೆಯುತ್ತಾರೆ. ಆದರೆ ಸುಮ್ಮನೇ ನಡೆಯುವುದಿಲ್ಲ. ತಮ್ಮ ಕಣ್ಣು ಕಿವಿಗಳನ್ನು ತೆರೆದು ಸುತ್ತಲಿನಿಂದ ಸಿಗಬಹುದಾದ ವಿಚಾರಗಳನ್ನು ಸ್ವೀಕರಿಸುತ್ತಾರೆ. ದಾರಿಯಲ್ಲಿ ಕಾಣುವ ಜೇಡ, ಜಿಂಕೆ, ಆನೆ, ಜೇನುಹುಳ, ಬಿಲ್ಲುಗಾರ, ವೇಶ್ಯೆ, ಸೂರ್ಯ, ಸಮುದ್ರ… ಎಲ್ಲರೂ ಅವರಿಗೆ ಪಾಠ ಕಲಿಸುತ್ತಾರೆ. ಅಥವಾ ಅವಧೂತರೇ ಅವರೊಳಗಿನ ಪಾಠವನ್ನು ಅರಿತುಕೊಳ್ಳುತ್ತಾರೆ. ಈ ಪಾಠಗಳು ಲೌಕಿಕ ಬದುಕಿಗೂ ಮುಖ್ಯ, ಅಧ್ಯಾತ್ಮ ಸಾಧನೆಗೂ ಮುಖ್ಯ.
ಈ ಕೃತಿ ಎರಡು ರೀತಿಯಿಂದ ಪಾಠ ಕಲಿಸುತ್ತದೆ ನಮಗೆ. ಮೊದಲನೆಯದು, ಇದರೊಳಗೆ ಅವಧೂತರು ಹೇಳಿದ ಪಾಠಗಳ ಮೂಲಕ. ಇನ್ನೊಂದು, ನಾವೂ ನಮ್ಮ ಸುತ್ತಲಿನ ಜಗತ್ತಿನಿಂದ ಯಾವ ಪಾಠವನ್ನು ಕಲಿಯಬಹುದು ಎಂದು ಯೋಚಿಸುವಂತೆ ಮಾಡುವ ಮೂಲಕ. ಎರಡನೆಯ ಪಾಠ ನಮ್ಮ ಬದುಕಿಗೆ ಮುಖ್ಯ. ಕೈತುತ್ತಿನಲ್ಲಿಯೇ ಬದುಕಿಡೀ ಕಳೆಯಲಾಗದು. ನಾವೂ ನಮ್ಮ ತುತ್ತು ಸಂಪಾದಿಸಬೇಕಲ್ಲವೇ? ಅನುಭವಜನ್ಯ ಪಾಠಗಳು ಬದುಕಿನುದ್ದಕ್ಕೂ ಉಳಿಯುತ್ತವೆ.
ಒಂದು ಗಂಟೆಯ ಅವಧಿಯೂ ಬೇಡ ಈ ಪುಟ್ಟ ಕೃತಿಯನ್ನು ಓದಿ ಮುಗಿಸಲು. ಆದರೆ, ಕಾಫಿಯನ್ನು ನಿಧಾನಕ್ಕೆ ಗುಟುಕರಿಸಿ ಆಸ್ವಾದಿಸುವ ಕಾಫಿಪ್ರೇಮಿಗಳಂತೆ, ಬದುಕನ್ನು ಪ್ರೀತಿಸುವವರು ನಿಧಾನಕ್ಕೆ ಒಳಗಿಳಿಸಿಕೊಳ್ಳುತ್ತಾ ಓದಬಹುದಾದ, ಅಥವಾ ಹಾಗೆಯೇ ಓದಬೇಕಾದ ಕೃತಿಯೂ ಹೌದು ಇದು.
ಈ ಕೃತಿಗಳ ಇನ್ನೊಂದು ವಿಶೇಷವೆಂದರೆ ಒಮ್ಮೆ ಓದಿ ಬದಿಗಿಡುವ ಕೃತಿಗಳಲ್ಲ ಇವು. ನಮ್ಮ ಮೇಜಿನಲ್ಲಿ ಎದುರಿಗೆ ಇಟ್ಟುಕೊಂಡು ಆಗೊಮ್ಮೆ ಈಗೊಮ್ಮೆ ನಡುವಿನ ಒಂದೆರಡು ಪುಟಗಳನ್ನು ಓದಬಹುದು. ಹೊಸದೊಂದು ನೋಟ ಪಡೆದುಕೊಳ್ಳಬಹುದು, ಸಮಸ್ಯೆಗಳಿಗೆ ಉತ್ತರ ಹುಡುಕಿಕೊಳ್ಳಬಹುದು.
ಈ ಸರಣಿಯಲ್ಲಿ ಈ ವರೆಗೆ ೬ ಕೃತಿಗಳು ಪ್ರಕಟಗೊಂಡಿವೆ – ಧರ್ಮ, ಭಗವದ್ಗೀತೆ, ಆತ್ಮಗುಣ, ಚಾಣಕ್ಯ, ಯಕ್ಷಪ್ರಶ್ನೆ.