Vinay Madhav
Vinay Madhav

ಜ್ಞಾನ, ತರ್ಕ, ವಿತಂಡವಾದ ಮತ್ತು ದಶಕಂಠ ರಾವಣ….

ನಮ್ಮ ಪೌರಾಣಿಕ ಕಥೆಗಳನ್ನು ವಿಶ್ಲೇಷಣಾತ್ಮಕವಾಗಿ ಪುನರ್ಸೃಷ್ಟಿ ಮಾಡುವುದು ಹೊಸದೇನಲ್ಲ. ಹಾಗೆ ನೋಡಿದರೆ, ನಮ್ಮ ಪೌರಾಣಿಕ ಕಥೆಗಳು ಕಾಲ ಕಾಲಕ್ಕೆ ತಕ್ಕಂತೆ ವಿಮರ್ಷೆಗೆ ಒಳಪಟ್ಟ ಕೃತಿಗಳೆಂದರೆ ತಪ್ಪಾಗಲಾರದು. ಆದರೆ, ಇತ್ತೀಚಿನ ದಿನಗಳಲ್ಲಿ, ಪೌರಾಣಿಕ ಕಥೆಗಳಾದ ರಾಮಾಯಣ ಮತ್ತು ಮಹಾಭಾರತಗಳನ್ನು, ಒಂದು ಪಾತ್ರದ ದೃಷ್ಟಿ ಕೋನದಿಂದ, ಆಧುನಿಕ ಪ್ರಪಂಚದ ದೃಷ್ಟಿಕೋನಕ್ಕೆ ಹೊಂದುವಂತೆ ಬರೆಯುವ ಅನೇಕ ಪ್ರಯತ್ನಗಳು ನಡೆದಿವೆ.

ಉದಾಹರಣೆಗೆ, ರಾಮಾಯಣವನ್ನು ರಾವಣ, ಮಂಡೋದರಿ, ಊರ್ಮಿಳೆ, ಸೀತೆ ಮುಂತಾದವರ ದೃಷ್ಟಿಕೋನದಿಂದಲೂ, ಮಹಾಭಾರತವನ್ನು ಕರ್ಣ, ದುರ್ಯೋಧನ, ಗಾಂಧಾರಿ, ಭೀಷ್ಮರ ದೃಷ್ಟಿಕೋನದಿಂದ ನಿರೂಪಿಸುವ ಅನೇಕ ಪುಸ್ತಕಗಳು ಬಂದಿವೆ. ವ್ಯಾವಹಾರಿಕ ದೃಷ್ಟಿಯಿಂದ ಈ ಪುಸ್ತಕಗಳು ಯಶಸ್ಸನ್ನು ಕಂಡಿವೆ ಕೂಡ. ಇಂತಹ ಆಧುನಿಕ ಬರಹಗಾರರಲ್ಲಿ ಅಮಿಶ್‌ ತ್ರಿಪಾಟಿ, ಡಾ ದೇವದತ್ತ ಪಾಟ್ನಾಯಕ್‌, ಕವಿತಾ ಕಾಣೆ, ಚಿತ್ರಾ ಬ್ಯಾನರ್ಜಿ ದಿವಾಕರುಣಿ, ಅಶ್ವಿನ್‌ ಸಿಂಘ್ ಪ್ರಮುಖರು.

ಆದರೆ, ಇಂತಹ ನಿರೂಪಣೆಯ ಹರಿಕಾರರು ಇವರೇ ಎಂದು ಹೇಳಲಾಗುವುದಿಲ್ಲ. ವಾಲ್ಮೀಕಿ ರಾಮಾಯಣವಲ್ಲದೆ, ತುಳಸೀದಾಸರ ರಾಮ್‌ ಚರಿತ ಮಾನಸ ಸಹ ಪದ್ಯದ ರೂಪದಲ್ಲಿ ಬರೆಯಲ್ಪಟ್ಟಿತು. ಆದರೆ, ಮೂಲ ರಾಮಾಯಣದಿಂದ ಹೆಚ್ಚೇನೂ ಬದಲಾವಣೆ ಕಾಣಲಿಲ್ಲ. ಆದರೆ, ಕರ್ಣನನ್ನು ಆರಾಧಿಸುತ್ತಾ ಬರೆದ ಕುಮಾರ ವ್ಯಾಸ ಮತ್ತು ದುರ್ಯೋಧನ ದೃಷ್ಟಿ ಕೋನದಲ್ಲಿ ಮೂಡಿ ಬಂದ ರನ್ನನ ಗದಾ ಯುದ್ದ ಒಂದು ಹೊಸ ಭೂಮಿಕೆಯನ್ನೇ ಸೃಷ್ಟಿಸಿದ್ದವು.

ತೀರ ಇತ್ತೀಚೆಗೆ ಎಂದರೆ ಎಸ್‌ ಎಲ್‌ ಭೈರಪ್ಪನವರು ಬರೆದ ಪರ್ವ ಒಂದು ಹೊಸ ಆಯಾಮವನ್ನೇ ಸೃಷ್ಟಿಸಿತ್ತು. ಮೂಲ ಕಥೆಗೆ ಚ್ಯುತಿ ತರದೆ, ಮಹಾಭಾರತದ ಪಾತ್ರಗಳ ಅಲೌಕಿಕ ಶಕ್ತಿಯನ್ನು ಲೌಕಿಕತೆಗೆ ಇಳಿಸಿ, ಒಂದು ನವಿರಾದ ಕಥೆಯನ್ನು ಹೇಳಿದರು. ಆದರೆ, ಮುಂದೆ ಭೈರಪ್ಪ ಅವರು ಸೀತೆಯನ್ನು ಮುಖ್ಯ ಭೂಮಿಕೆಯಲ್ಲಿಟ್ಟು ಬರೆದ ಉತ್ತರ ಕಾಂಡ ನನಗೇಕೋ ಅಷ್ಟೊಂದು ಇಷ್ಟವಾಗಲಿಲ್ಲ.

ಇಂತಹ ಪ್ರಯತ್ನವನ್ನು ಮಾಡಿದವರಲ್ಲಿ ಭೈರಪ್ಪನವರೇ ಮೊದಲಿಗರು ಎಂದು ಹೇಳಲಾಗುವುದಿಲ್ಲ. ಗ್ರೀಕ್‌, ಪರ್ಷಿಯನ್‌ ಮತ್ತು ಈಜಿಪ್ಟಿನ ಪೌರಾಣಿಕ ಕಥೆಗಳೂ ಸಹ ಆಧುನಿಕಗೊಂಡಿವೆ. ಅದರಲ್ಲಿ ಪ್ರಮುಖವಾದುದು ಹೋಮರ್‌ ಬರೆದ ಇಲಿಯಾಡ್. ಗ್ರೀಕ್‌ ಪುರಾಣದಲ್ಲಿ ಬರುವ ಪ್ಯಾರಿಸ್‌ ಮತ್ತು ಹೆಲೆನ್‌ ಪ್ರಣಯ ಪ್ರಸಂಗವು, ಟ್ರಾಯ್‌ ನಗರದ ಸರ್ವನಾಶದೊಂದಿಗೆ ಕೊನೆಗೊಳ್ಳುತ್ತದೆ. ನಮ್ಮ ಮಹಾಭಾರತಕ್ಕೆ ಸ್ವಲ್ಪ ಸಾಮ್ಯವಿರುವ ಇಲಿಯಾಡ್‌, ಗ್ರೀಕ್‌ ಪುರಾಣದ ಮೂಲ ಸ್ವರೂಪದಲ್ಲಿ ಕೆಲವು ಬದಲಾವಣೆಗಳನ್ನು ಕಂಡಿದೆ.

ಪುರಾಣದ ಪ್ರಕಾರ, ದೇವತೆಗಳು ತಮ್ಮ ಇಚ್ಚೆಗೆ ಅನುಸಾರವಾಗಿ ಟ್ರಾಯ್‌ ಅಥವಾ ಗ್ರೀಕ್‌ ಪರವಾಗಿ ಯುದ್ದ ಮಾಡುತ್ತಾರೆ. ಇಲಿಯಾಡ್‌ ನಲ್ಲಿ ಪ್ಯಾರಿಸ್‌ ಅಖಿಲಿಸ್‌ ನನ್ನು ಕೊಂದು ಇಡಾ ಬೆಟ್ಟಗಳತ್ತ ಪಲಾಯನ ಮಾಡಿ ತಪ್ಪಿಸಿಕೊಂಡರೆ, ಗ್ರೀಕ್‌ ಪುರಾಣದ ಪ್ರಕಾರ ಒಡೇಸಿಸ್‌ ಅವನನ್ನು ಕೊಂದು ಹಾಕುತ್ತಾನೆ. ಇಲಿಯಾಡ್‌ ನಲ್ಲಿ ದೇವರುಗಳ ಮತ್ತು ದೈವ ಶಕ್ತಿಯ ಪಾತ್ರಗಳನ್ನು, ಭೈರಪ್ಪನವರು ಪರ್ವದಲ್ಲಿ ಮೊಟಕು ಗೊಳಿಸಿದಂತೆ, ಮೊಟಕು ಗಳಿಸಲಾಗಿದೆ.

ಪುರಾಣಗಳ ಮೂಲ ಕೃತಿಗಳನ್ನು ಹೊಸ ವಿಧಗಳಲ್ಲಿ ಹೇಳುವ ಪರಿಪಾಠ ಹೆಚ್ಚಾಗುತ್ತಿರುವ ಈ ಕಾಲದಲ್ಲಿ, ಜಗದೀಶ್‌ ಶರ್ಮ ಸಂಪರವರು ಪುರಾಣದ ಮೂಲ ಸ್ವರೂಪವನ್ನು ಮುಂದಿಡಿವ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ನಮ್ಮ ಪುರಾಣಗಳ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿರುವ ಸಂಪರವರ ಜ್ಞಾನ ಮತ್ತು ವಸ್ತು ನಿಷ್ಟತೆ ಪ್ರಶ್ನಾತೀತ.

ಪೌರಾಣಿಕ ಕಥೆಗಳಲ್ಲಿ ಬಾಲ್ಯದಿಂದಲೂ ಆಸಕ್ತಿ ಹೊಂದಿದ ನಾನು, ಸಂಪರವರ ಇತ್ತೀಚಿನ ಪುಸ್ತಕ ದಶಕಂಠ ರಾವಣ ಪುಸ್ತಕವನ್ನು ಆಸಕ್ತಿಯಿಂದಲೇ ಕೈಗೆತ್ತಿಕೊಂಡೆ. ಮುನ್ನುಡಿಯಲ್ಲಿ ಸಂಪರವರು ಬರೆದಂತೆ ರಾವಣನ ಜನ್ಮಾಂತರದ ಕಥೆಗೆ ವ್ಯಾಸರನ್ನು ಹಿಡಿದುಕೊಳ್ಳಲಾಗಿದೆ. ಹಾಗಾಗಿ, ವಾಲ್ಮೀಕಿಗಳ ರಾಮಾಯಣ, ವ್ಯಾಸರ ಭಾಗವತ ಮತ್ತು ಪದ್ಮ ಪುರಾಣಗಳು ಈ ಕೃತಿಗೆ ಆಕರ. ಅಲ್ಲಿ ಬರೆದಿರುವುದನ್ನೆಲ್ಲ ಇಲ್ಲಿ ಬರೆದಿಲ್ಲ. ಆದರೆ, ಅಲ್ಲಿ ಬರೆದಿಲ್ಲದಿರುವುದನ್ನು ಇಲ್ಲಿ ಬರೆದಿಲ್ಲ ಎಂದು ಶರಾ ಹಾಕಿದ್ದಾರೆ.

ರಾಮಾಯಣದಲ್ಲಿ ನನಗೆ ವೈಯಕ್ತಿಕವಾಗಿ ಬಹಳ ಇಷ್ಟವಾಗುವ ಪಾತ್ರ ರಾವಣ. ಅವನ ನಂತರ ಹನುಮಂತ, ವಾಲಿ, ಜಾಂಬವಂತ ಮುಂತಾದವರು ಮುಗಿದು, ರಾಮ ಬರುವ ಹೊತ್ತಿಗೆ ಬಹಳ ಸಮಯವಾಗಿರುತ್ತದೆ. ಪುಸ್ತಕ ಓದುತ್ತಾ ಹೋದಂತೆ, ನನಗೆ ರಾವಣನ ಬಗ್ಗೆ ತಿಳಿಯದ ಎಷ್ಟೋ ವಿಷಯಗಳಿವೆ ಎನ್ನುವುದು ಅರ್ಥವಾಯಿತು. ಮೊದಲನೆಯದಾಗಿ, ಆತ ಬ್ರಹ್ಮನ ಮರಿಮಗ. ಆತನ ತಾಯಿ ಕೈಕಸಿ ಎಂದು ಗೊತ್ತಿತ್ತೇ ವಿನಹ, ತಂದೆ ವಿಶ್ರವಸ್‌ ಎನ್ನುವುದು ಗೊತ್ತಿರಲಿಲ್ಲ. ರಾವಣನಿಗೆ ಇಕ್ವಾಕ್ಷು ವಂಶದ ಶಾಪ ಇದ್ದಿದ್ದೂ ತಿಳಿದಿರಲಿಲ್ಲ.

ನನಗೆ ತಿಳಿದಂತೆ, ರಾವಣನಿಗೆ ಮಂಡೋದರಿ ಮತ್ತು ಧಾನ್ಯಮಾಲಿನಿ ಎಂಬ ಇಬ್ಬರು ಪತ್ನಿಯರಿದ್ದರು. ತನ್ನ ತಂಗಿ ಶೂರ್ಪಣಕಿಗೆ ಆದ ಅವಮಾನಕ್ಕೆ ಪ್ರತೀಕಾರವಾಗಿ ಸೀತೆಯನ್ನು ಅಪಹರಿಸಿದ್ದು ಬಿಟ್ಟರೆ, ಬೇರೆ ಅಪರಾಧಗಳನ್ನು ಮಾಡಿಲ್ಲ ಎಂದು.

ಜೊತೆಯಲ್ಲಿ, ರಾವಣನ ಬಗ್ಗೆ ಅನೇಕ ಕಥೆಗಳನ್ನು ಸಹ ಓದಿದ್ದೆ.

ಅದರಲ್ಲಿ ಪ್ರಮುಖವಾದದ್ದು, ತಾಯಿ ಕೈಕಸಿ ದೊಡ್ಡ ಶಿವ ಭಕ್ತೆ ಮತ್ತು ದಿನವೂ ಶಿವನನ್ನು ಪೂಜಿಸುತ್ತಿದ್ದಳು. ಒಮ್ಮೆ ಆಕೆಗೆ ಶಿವನ ಆತ್ಮ ಲಿಂಗದ ಮೇಲೆ ಮನಸ್ಸಾಯಿತು. ಅದನ್ನು ರಾವಣನಿಗೆ ಹೇಳಿದಾಗ, ರಾವಣ ಕೈಲಾಸ ಪರ್ವತಕ್ಕೆ ಹೋಗಿ, ಶಿವನನ್ನು ಕಾಡಿ, ಬೇಡಿ, ಆತ್ಮ ಲಿಂಗವನ್ನು ಪಡೆದುಕೊಂಡು ಲಂಕೆಯತ್ತ ಹೊರಟ. ಆದರೆ, ಒಂದು ಷರತ್ತು ಇತ್ತು. ಆತ ಎಲ್ಲಿ ಆತ್ಮ ಲಿಂಗವನ್ನು ನೆಲದ ಮೇಲೆ ಇಡುತ್ತಾನೋ, ಅಲ್ಲಿ ಅದು ಪ್ರತಿಷ್ಠಾಪನೆ ಆಗುತ್ತದೆ ಎಂದು.

ದೇವತೆಗಳೆಲ್ಲ ಹೆದರಿದರು. ಏಕೆಂದರೆ, ಆತ್ಮ ಲಿಂಗ ಲಂಕೆಯಲ್ಲಿ ಪ್ರತಿಷ್ಠಾಪನೆಯಾದರೆ, ರಾವಣ ಅಜೇಯನಾಗುತ್ತಾನೆ. ಹಾಗಾಗಿ, ಗಣಪತಿಯ ಮೊರೆ ಹೊಕ್ಕರು. ದಾರಿಯಲ್ಲಿ ಸಂಜೆಯಾಯಿತು ಮತ್ತು ಅದು ರಾವಣನ ಸಂಧ್ಯಾವಂದನೆ ಸಮಯ. ಆತ್ಮ ಲಿಂಗವನ್ನು ಏನು ಮಾಡುವುದು? ಎಂದು ಅತ್ತಿತ್ತ ನೋಡಿದಾಗ, ಗಣಪತಿಯು ದನ ಕಾಯುವ ಹುಡುಗನ ವೇಷದಲ್ಲಿ ಅಲ್ಲಿ ನಿಂತಿದ್ದ. ತನ್ನ ಸಂಧ್ಯಾವಂದನೆ ಮುಗಿಯುವವರೆಗೆ ಲಿಂಗವನ್ನು ಹಿಡಿದುಕೊಳ್ಳಲು ರಾವಣ ಆ ಹುಡುಗನಿಗೆ ವಿನಂತಿಸಿಕೊಳ್ಳುತ್ತಾನೆ. ಆದರೆ, ಆ ಹುಡುಗನು, ತಾನು ಮನೆಗೆ ಹೋಗಬೇಕಾದ್ದರಿಂದ, ಆತ್ಮ ಲಿಂಗವನ್ನು ಸ್ವಲ್ಪ ಹೊತ್ತು ಮಾತ್ರ ಹಿಡಿದುಕೊಳ್ಳುವುದಾಗಿ ಹೇಳುತ್ತಾನೆ. ತಾನ ಮೂರು ಬಾರಿ ರಾವಣನ ಹೆಸರನ್ನು ಕೂಗುವುದಾಗಿಯೂ, ಅಷ್ಟರೊಳಗೆ ಬರದಿದ್ದರೆ ತಾನು ಆತ್ಮ ಲಿಂಗವನ್ನು ನೆಲದಲ್ಲಿಟ್ಟು ಹೋಗುವುದಾಗಿಯೂ ಹೇಳುತ್ತಾನೆ.

ಅದಕ್ಕೆ ಒಪ್ಪಿದ ರಾವಣನು, ಎಷ್ಟೇ ಬೇಗ ಸಂಧ್ಯಾವಂದನೆ ಮುಗಿಸಿದರೂ, ಆ ಹುಡುಗ ರಾವಣನ ಹೆಸರನ್ನು ಮೂರು ಬಾರಿ ಕೂಗಿರುತ್ತಾನೆ ಮತ್ತು ಆತ್ಮ ಲಿಂಗವನ್ನು ನೆಲದ ಮೇಲೆ ಇಡುತ್ತಾನೆ. ಆತ್ಮ ಲಿಂಗ ಅಲ್ಲಿಯೇ ಪ್ರತಿಷ್ಠಾನಗೊಂಡಿರುತ್ತದೆ. ಸಿಟ್ಟಿಗೆದ್ದ ರಾವಣ, ಗಣಪತಿಯನ್ನು ಹುಡುಕಿಕೊಂಡು ಹೋಗಿ, ಅವನ ತಲೆಯ ಮೇಲೆ ಗುದ್ದುತ್ತಾನೆ. ಅಷ್ಟರಲ್ಲಿ ಗಣಪತಿ ಕಲ್ಲಾಗಿರುತ್ತಾನೆ. ಇದು ನಡೆದಿರುವುದು ಇಂದಿನ ಗೋಕರ್ಣದಲ್ಲಿ ಎಂದು ಸ್ಥಳ ಪುರಾಣ ಹೇಳುತ್ತದೆ.

ನನಗೆ ಬಹಳ ಇಷ್ಟವಾದ ಕಥೆ ಎಂದರೆ, ಲಂಕೆಯಲ್ಲಿ ಯುದ್ದ ಆರಂಭವಾಗುವ ಮುಂಚಿನ ಕಥೆ. ಯುದ್ದದ ಆರಂಭದಲ್ಲಿ ಯುದ್ದ ದೀಕ್ಷೆ ಪಡೆಯುವುದು ಕ್ಷತ್ರಿಯರ ಪದ್ದತಿ. ಆದರೆ, ರಾವಣನ ಹೆದರಿಕೆಯಿಂದಾಗಿ, ಲಂಕೆಯಲ್ಲಿದ್ದ ಯಾವ ಬ್ರಾಹ್ಮಣನೂ ರಾಮನಿಗೆ ಯುದ್ದ ದೀಕ್ಷೆ ಕೊಡಲು ಮುಂದಾಗಲಿಲ್ಲ. ಸಕಲ ಶಾಸ್ತ್ರ ಪಾರಂಗತನಾದ ರಾವಣ, ಸ್ವತಃ ಬ್ರಹ್ಮ ಜ್ಞಾನ ಪಡೆದ ಬ್ರಾಹ್ಮಣನೂ ಆಗಿದ್ದ. ವಿಷಯ ತಿಳಿದಾಗ, ಅವನೇ ರಾಮನಿದ್ದ ಜಾಗಕ್ಕೆ ಬಂದು, ರಾಮನಿಗೆ ಯುದ್ದ ದೀಕ್ಷೆಯನ್ನು ನೀಡಿ, ಅರಮನೆಗೆ ಹಿಂದುರುಗಿದ.

ರಾವಣನಿಗೆ ದಶಕಂಠ ಎಂದು ಕರೆದದ್ದು, ಆತನ ಹತ್ತು ಗುಣಗಳಿಂದ. ಒಂದೊಂದು ತಲೆಯೂ ಒಂದೊಂದು ಗುಣಗಳ ಪ್ರತೀಕ. ಅರಿಷಡ್ವರ್ಗಗಳ ಆರು ತಲೆ, ಜ್ಞಾನ, ನ್ಯಾಯ, ಸಂಪತ್ತು ಮತ್ತು ಶೌರ್ಯ ಎಂಬ ನಾಲ್ಕು ಒಳ್ಳೆಯ ಗುಣಗಳನ್ನು ಒಳಗೊಂಡವನೇ ಈ ದಶಕಂಠ ಎಂಬುದು ನಾನು ರಾವಣನನ್ನು ಅರ್ಥ ಮಾಡಿಕೊಂಡ ಪರಿ.

ಆದರೆ ಸಂಪರವರ ರಾವಣ ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿದವ, ಅಸ್ತ್ರವಿದ್ಯೆಯಲ್ಲಿ ಕುಶಲ, ತಂತ್ರಗಾರಿಕೆಯಲ್ಲಿ ಪ್ರಚಂಡ, ಬಲಿಷ್ಠ-ಸಮರ್ಥ-ಪರಾಕ್ರಮಿ ಎಂದು ಒಪ್ಪಿದರೂ, ಆತನ ಜೀವನದಲ್ಲಿ ಒಂದು ವರ: ಒಂದು ತಪ್ಪು: ಒಂದು ಶಾಪ, ಮತ್ತೊಂದು ವರ: ಮತ್ತೊಂದು ತಪ್ಪು: ಮತ್ತೊಂದು ಶಾಪದೊಂದಿಗೇ ಆತನ ಜೀವನ ಸಾಗಿತು ಎಂದಿದೆ. ಅದ್ಭುತವಾದ ಗುಣಗಳಿದ್ದರೂ, ರಾವಣ ಒಂದೇ ಒಂದು ಒಳ್ಳೆ ಕೆಲಸ ಮಾಡಿದ ಉದಾಹರಣೆಗಳಿಲ್ಲ.

ಕನ್ನಡ ಚಲನಚಿತ್ರ ರಂಗದಲ್ಲಿ, ಪೌರಾಣಿಕ ಪಾತ್ರಗಳ ವಿಷಯ ಬಂದಾಗ, ನನಗೆ ಬಹಳ ಇಷ್ಟವಾಗುವುದು ಡಾ ರಾಜ್‌ ಕುಮಾರ್‌ ಮತ್ತು ವಜ್ರಮುನಿ. ಈ ಪುಸ್ತಕವನ್ನು ಓದಿದಾಗ, ಯಾರಾದರೂ ಭಕ್ತ ಪ್ರಹ್ಲಾದದಲ್ಲಿ ಹಿರಣ್ಯಕಶಿಪುವಿನ ಪಾತ್ರವನ್ನಾಗಲೀ, ಬಬ್ರುವಾಹನ ಚಿತ್ರದಲ್ಲಿ ಅರ್ಜುನನ ಪಾತ್ರವನ್ನಾಗಲೀ, ರಾಜ್‌ ಕುಮಾರ್‌ ಅವರು ಸಮರ್ಥವಾಗಿ ನಿರ್ವಹಿಸಿಲ್ಲ ಎಂದು ಹೇಳಿದಂತಾಗಿತ್ತು. ಬೇರೆ ಯಾರಾದರೂ ಹೇಳಿದ್ದರೆ ನಾನು ಉಪೇಕ್ಷಿಸುತ್ತಿದ್ದೆ. ಆದರೆ, ಈ ಪುಸ್ತಕವನ್ನು ಬರೆದವರು ಸಂಪರವರು ಮತ್ತು ಅವರ ಜ್ಞಾನದ ಆಳವನ್ನು ಯಾವುದೇ ಕಾರಣಕ್ಕೂ ನಾನು ಪ್ರಶ್ನಿಸಲಾರೆ.

ಇಂತಿರ್ಪ ಸಂದರ್ಭದಲ್ಲಿ ನನ್ನ ನೆರವಿಗೆ ಬಂದವರು ವಿಷ್ಣು ಶರ್ಮ. ಚಿಕ್ಕಂದಿನಿಂದ ಬೆಳೆಯುವಾಗ ನಾವು ಪಂಚತಂತ್ರ ಕಥೆಗಳನ್ನು ಓದುತ್ತಾ, ತರ್ಕಶಾಸ್ತ್ರವನ್ನು ಸರಳವಾಗಿ ಕಲಿತದ್ದು ಈ ವಿಷ್ಣು ಶರ್ಮರಿಂದ. ಈ ಪುಸ್ತಕವನ್ನು ಓದಿದ ಮೇಲೆ, ತರ್ಕವನ್ನು ಉಪಯೋಗಿಸಿ, ಸಂಪರವರ ಮುಂದೆ ಒಂದು ವಿತಂಡವಾದವನ್ನು ಮಂಡಿಸುವ ಮನಸ್ಸಾಯಿತು.

ಜಯ-ವಿಜಯರು ಶಾಪಗ್ರಸ್ತರಾದಾಗ, ವಿಮೋಚನೆಗಾಗಿ ಶ್ರೀಹರಿಯ ಮೊರೆ ಹೋಗುತ್ತಾರೆ. ಆಗ ಶ್ರೀಹರಿಯು, ನನ್ನ ಮಿತ್ರರಾಗಿ ಭೂಮಿಯಲ್ಲಿ ಹತ್ತು ಜನ್ಮಗಳನ್ನು ಎತ್ತುತ್ತೀರೋ, ಅಥವಾ ನನ್ನ ಶತ್ರುಗಳಾಗಿ ಮೂರು ಜನ್ಮ ಎತ್ತಿ, ನನ್ನಿಂದಲೇ ಹತರಾಗುತ್ತೀರೋ? ಎಂದು ಕೇಳುತ್ತಾನೆ.

ಹತ್ತು ಧೀರ್ಘಾಯುಷ್ಯದ ಮಿತ್ರ ಜೀವನಕ್ಕಿಂತ, ಮೂರು ಅಲ್ಪಾಯುಷ್ಯದ ಶತ್ರು ಜೀವನವೇ ಮೇಲು. ಬೇಗನೆ ನಾವು ವೈಕುಂಠಕ್ಕೆ ಹಿಂದುರುಗಬಹುದು ಎಂದು ಹೇಳುತ್ತಾರೆ. ಆದರೆ, ಸಂಪರವರ ರಾವಣ ಮತ್ತು ಕುಂಭಕರ್ಣರು, ಕೃತ ಯುಗದಿಂದ, ತೇತ್ರಾಯುಗದವರಗೆ, ಸುಮಾರು ಅರವತ್ತು ಸಾವಿರ ವರ್ಷ ಬದುಕುತ್ತಾರೆ ಎಂದು ಹೇಳುತ್ತಾರೆ. ಅಲ್ಲಿಗೆ, ಶ್ರೀಹರಿಯ ಶಾಪ ಪರಿಹಾರದ ಅರ್ಥವೇ ತಪ್ಪಾಗುತ್ತದೆ.

ಎರಡನೆಯದಾಗಿ, ರಾವಣನನ್ನು ವೇದ-ಶಾಸ್ತ್ರ ಪಾರಂಗತನಾಗಿ, ಬ್ರಹ್ಮ ಜ್ಞಾನ ಪಡೆದವನು ಎಂದಾದರೆ, ಆತ ಬ್ರಾಹ್ಮಣನಾಗುತ್ತಾನೆ. ಆದರೆ, ಆತ ನರಭಕ್ಷಕ ಎಂದು ಈ ಪುಸ್ತಕದಲ್ಲಿ ಉಲ್ಲೇಖವಾದ್ದದ್ದು, ರಾವಣ ಅಥವಾ ಅವನ ಕುಟುಂಬದವರು ಯಾವುದೇ ದೈವಾನುಗ್ರಹಕ್ಕೆ ಅರ್ಹನಲ್ಲ ಎಂದಾಗುತ್ತದೆ. ಆದರೂ, ಆತ ತಪಸ್ಸು ಮಾಡಿದಾಗಲೆಲ್ಲ ಬ್ರಹ್ಮ ಮತ್ತು ಮಹೇಶ್ವರರ ಅನುಗ್ರಹಕ್ಕೆ ಪಾತ್ರನಾಗುತ್ತಾ ಹೋಗುತ್ತಾನೆ.

ನನ್ನ ವಿತಂಡ ವಾದಗಳನ್ನು ನಾನು ಮಂಡಿಸುತ್ತಲೇ ಹೋಗಬಹುದು. ಆದರೆ, ಅದು ಸಂಪರವರ ಜ್ಞಾನಕ್ಕೆ ಯಾವುದೇ ಚ್ಯುತಿಯನ್ನು ತರಲು ಸಾಧ್ಯವಿಲ್ಲ. ಏಕೆಂದರೆ, ನಮ್ಮ ಪುರಾಣಗಳ ಬಗ್ಗೆ ಅವರ ಅಧ್ಯಯನ ಮತ್ತು ಅವರು ಗಳಿಸಿರುವ ಪಾಂಡಿತ್ಯ ಅಪಾರ. ನಾನು ಹೆಚ್ಚಿಗೆ ಮಾತನಾಡಿದರೆ, ಅದು ಗ್ರೀಕ್‌ ತತ್ವಜ್ಞಾನಿ ಪ್ಲಾಟೋ ಹೇಳಿದಂತೆ, ʼAny fool can pelt a pebble into ocean, that even hundred scholars cannot retrieve,ʼಆಗುತ್ತದೆ.

ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ, ಇದೊಂದು ಅದ್ಭುತವಾದ ಅಧ್ಯಯನ ಶೀಲ ಪುಸ್ತಕ. ರಾಮಾಯಣದಲ್ಲಿ ಬರುವ ಎಲ್ಲಾ ಪಾತ್ರಗಳ ಸ್ಥೂಲ ಪರಿಚಯ ಈ ಪುಸ್ತಕದಿಂದ ದೊರಕುತ್ತದೆ. ಅಷ್ಟೇ ಅಲ್ಲದೆ, ಕೊನೆಯಲ್ಲಿ ರಾವಣನ ವಂಶ ವೃಕ್ಷ, ಜಯ-ವಿಜಯರ ಶಾಪ ವೃತ್ತಾಂತಗಳು ಮತ್ತು ರಾವಣನಿಗೆ ಸಿಕ್ಕ ಶಾಪ-ತಾಪಗಳ ಪಟ್ಟಿಯನ್ನೂ ನೀಡಿದ್ದಾರೆ. ನಮ್ಮ ಪೌರಾಣಿಕ ದೃಷ್ಟಿಯಲ್ಲಿ ಇದೊಂದು ಓದಲು ಮತ್ತು ಸಂಗ್ರಹದಲ್ಲಿಡಲು ಉತ್ತಮ ಪುಸ್ತಕ ಎಂದೇ ಹೇಳಬಹುದು….

ಮಾಕೋನಹಳ್ಳಿ ವಿನಯ್‌ ಮಾಧವ