Yathiraj Veerambudhi
Yathiraj Veerambudhi
ರಾಮಾಯಣದ ಮೂಲಕ ವ್ಯಕ್ತಿತ್ವ ವಿಕಸನದ ಪಾಠ
ಶ್ರೀ ಜಗದೀಶಶರ್ಮಾ ಸಂಪರ
ಸ್ಫೂರ್ತಿ ರಾಮಾಯಣ-1

ಬಾಲಕಾಂಡ

ಮತದಾನದ ದಿನ ಜನಪ್ರಿಯ ಲೇಖಕ ಶ್ರೀ ಜಗದೀಶಶರ್ಮಾ ಸಂಪ ಅವರೊಂದಿಗೆ ಮಾತನಾಡುತ್ತಿದ್ದೆ. ರಾಮಾಯಣದ ಕಥೆಯ ವೈಶಿಷ್ಟ್ಯದ ಬಗ್ಗೆ ನಮ್ಮ ಮಾತುಕತೆ ನಡೆದಿತ್ತು. ಎಲ್ಲ ವಯಸ್ಸಿನವರಿಗೂ ಏನಾದರೊಂದನ್ನು ಬಚ್ಚಿಟ್ಟುಕೊಂಡಿರುವ ಗ್ರಂಥ ವಾಲ್ಮೀಕಿ ಕೃತ ರಾಮಾಯಣ. ಒಬ್ಬ ವ್ಯಕ್ತಿ ಅವನ ಬಾಲ್ಯ, ಯೌವನ, ವೃದ್ಧಾಪ್ಯದ ಹಂತಗಳಲ್ಲಿ ಮತ್ತೆ ಮತ್ತೆ ರಾಮಾಯಣ ಓದಿದರೆ ಅವನಿಗೆ ಹೊಸ ಹೊಸ ಹೊಳಹುಗಳು ಕಾಣುತ್ತವೆ.

ಎಲ್ಲ ಭಾಷೆಗಳಲ್ಲಿಯೂ ರಾಮಾಯಣ ಬಂದಿದೆ. ಅದರಲ್ಲಿ ಕೆಲವರು ನಾಟಕೀಯತೆಗಾಗಿ ಕೆಲವು ವಿಶೇಷ ದೃಶ್ಯಗಳನ್ನು ಸೇರಿಸಿದ್ದಾರೆ. ಉದಾಹರಣೆಗೆ ಮೂಲ ವಾಲ್ಮೀಕಿ ರಾಮಾಯಣದಲ್ಲಿಲ್ಲದ ಲಕ್ಷ್ಮಣ ರೇಖೆ, ಎಂಜಲು ಹಣ್ಣುಗಳನ್ನು ರಾಮನಿಗೆ ನೀಡಿದ ಶಬರಿ ಇತ್ಯಾದಿ. ಅವಧ್‌ ಭಾಷೆಯ ತುಲಸೀದಾಸರ ರಾಮಚರಿತ ಮಾನಸ, ತಮಿಳು ಭಾಷೆಯ ಕಂಬ ರಾಮಾಯಣ, ಕನ್ನಡ ಭಾಷೆಯ ತೊರವೆ ರಾಮಾಯಣಗಳು ನನಗೆ ತಿಳಿದ ಕೆಲವು ಕೃತಿಗಳು.

ʼಶುದ್ಧಬ್ರಹ್ಮ ಪರಾತ್ಪರ ರಾಮʼ ಎಂಬ ಭಜನೆ, ಸ್ವಾತಿ ತಿರುನಾಳರ ಸಂಸ್ಕೃತ ಭಾಷೆಯ ʼಭಾವಯಾಮಿ ರಘುರಾಮಂʼ, ಮೈಸೂರು ವಾಸುದೇವಾಚಾರ್ಯರ ತೆಲುಗು ಭಾಷೆಯ ʼರಾರಾ ರಾಜೀವಲೋಚನ ರಾಮʼ ಇಡೀ ರಾಮಾಯಣವನ್ನು ಕೆಲವು ಸಾಲುಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡಿವೆ.

ಮಹಾನ್‌ ರಾಮಭಕ್ತ ಶ್ರೀ ತ್ಯಾಗರಾಜರು ʼನನ್ನು ಪಾಲಿಂಪ ನಡಿಚಿ ವಚ್ಚಿತೀವೋʼ ಎಂಬ ಕೀರ್ತನೆಯಲ್ಲಿ ನಡೆದು ಬರುತ್ತಾ ರಾಮನು ಉದ್ಧಾರ ಮಾಡಿದ ಜನರ ಬಗ್ಗೆ ಹೇಳಿದ್ದಾರೆ.

ʼಯಾರೋ ಇವರ್‌ ಯಾರೋ ಎನ್ನ ಪೆಯರೋʼ ಎನ್ನುವ ತಮಿಳು ಕೀರ್ತನೆಯಲ್ಲಿ ಸೀತಾ ಸ್ವಯಂವರಕ್ಕೆ ಮೊದಲು ಉದ್ಯಾನವನದಲ್ಲಿ ಶ್ರೀರಾಮನನ್ನು ಸೀತೆಯು ಕಂಡು ಹಾಡಿದಳೆಂಬ ಕಲ್ಪನೆ.

ಆದರೆ ಶ್ರೀ ಶರ್ಮಾ ಅವರ ಸ್ಫೂರ್ತಿ ರಾಮಾಯಣ ಓದಿ ಬಲು ಆನಂದವಾಯಿತು. ಚಿಕ್ಕ ಚಿಕ್ಕ ಅಧ್ಯಾಯಗಳು. ವಿಧಿಯೇ ಇಲ್ಲವಾದಾಗ ದೊಡ್ಡ ಅಧ್ಯಾಯ (ಉದಾಹರಣೆಗೆ ವಿಶ್ವಾಮಿತ್ರನ ಚರಿತ್ರೆ), ಮನಸ್ಸಿಗೆ ನಾಟುವಂತಹ ಶೀರ್ಷಿಕೆಗಳು. ನಮ್ಮ ಜೀವನವು ಸುಗಮವಾಗಿ ಸಾಗಲು ಬೇಕಾದ ರೀತಿ ನೀತಿಗಳು, ನಡೆಯಕೂಡದ ಕೆಲವು ವರ್ತನೆಗಳು, ನಂತರ ಕಥೆಯ ಒಂದು ಭಾಗ, ಅಂತಿಮವಾಗಿ ಒಂದು ಮುದ ಕೊಡುವ ನೀತಿ ವಾಕ್ಯ.

ಓದುಗರಿಗೆ ಸ್ಫೂರ್ತಿ ಕೊಡುವ ರಾಮಾಯಣ ಇದು. ಸರಳವಾದ ಭಾಷೆ. ಗಲಿಬಿಲಿಗೆ ತಾವಿಲ್ಲದ ಸ್ಫುಟವಾದ ಬರವಣಿಗೆ. ಬಾಲಕಾಂಡದಿಂದ ಭದ್ರವಾದ ಬುನಾದಿ ಹಾಕಿದ್ದಾರೆ ಶ್ರೀ ಶರ್ಮ ಅವರು.

ಜಗದೀಶ ಸರ್‌ ಬೇಗ ಬೇಗನೆ ಬರೆಯಿರಿ ಉಳಿದ ಕಾಂಡಗಳನ್ನು. ಜಮೀಲ್‌ ಸರ್‌, ಬೇಗ ಬೇಗನೆ ಹೊರತನ್ನಿ ಇನ್ನುಳಿದ ಕಾಂಡಗಳನ್ನು.

ಶ್ರೀರಾಮ ಜಯಂ..!

Yathiraj Veerambudhi Facebook Post Link